ನವದೆಹಲಿ(ಜೂ.28): ಲೋಕಸಭೆ ಚುನಾವಣೆ ಸೋಲಿನ ಹೊಣೆಯನ್ನು ಪಕ್ಷದ ಹಿರಿಯ ನಾಯಕರು ಹೊರದಿರುವುದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮುನಿಸಿಕೊಂಡಿದ್ದು ಎಲ್ಲರಿಗೂ ಗೊತ್ತೇ ಇದೆ.

ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹೊಣೆಯನ್ನು ಸ್ವತಃ ಹೊತ್ತಿರುವ ರಾಹುಲ್, ಈಗಾಗಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೆ ಪಕ್ಷ ಇದುವರೆಗೂ ಅವರ ರಾಜೀನಾಮೆ ಅಂಗೀಕರಿಸಿಲ್ಲ.

ಈ ಮಧ್ಯೆ ಪಕ್ಷದ ಹಿರಿಯ ನಾಯಕರು ಸೋಲಿನ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ರಾಹುಲ್ ಪಕ್ಷದ ವೇದಿಕೆಯಲ್ಲಿ ಇತ್ತಿಚೀಗೆ ಹೇಳಿದ್ದರು.

ಅದರಂತೆ ದೆಹಲಿ, ಮಧ್ಯಪ್ರದೇಶ ಮತ್ತು ಹರಿಯಾಣ ಕಾಂಗ್ರೆಸ್ ಘಟಕಗಳ ಅನೇಕ ನಾಯಕರು ಇದೀಗ ತಮ್ಮ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ.

ಪಕ್ಷದ ಕಾನೂನು ಮತ್ತು RTI ವಿಭಾಗದ ಮುಖ್ಯಸ್ಥ ವಿವೇಕ್ ತನ್ಕಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಹುಲ್ ಕೈ ಬಲಪಡಿಸಲು ಮತ್ತು ಅವರು ತಮಗೆ ಬೇಕಾದ ಹೊಸ ತಂಡ ಕಟ್ಟಲು ಅನುವು ಮಾಡಿಕೊಡಲು ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.

ಅದರಂತೆ ವಾಯುವ್ಯ ದೆಹಲಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಾಜೇಶ್ ಲಿಲೋತಿಯಾ ಕೂಡ ದೆಹಲಿ ಕಾಂಗ್ರೆಸ್ ಘಟಕದ ಕಾರ್ಯಕಾರಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.


ಇನ್ನುಳಿದಂತೆ ಹರಿಯಾಣ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸುಮಿತ್ರಾ ಚೌಹಾಣ್, ಮೇಘಾಲಯ ಪ್ರಧಾನ ಕಾರ್ಯದರ್ಶಿ ನೆಟ್ಟಾ ಪಿ. ಸಂಗ್ಮಾ, ಕಾರ್ಯದರ್ಶಿ ವಿರೇಂದ್ರ ರಾಠೋಡ್, ಛತ್ತೀಸ್;ಗಡ್’ ಕಾರ್ಯದರ್ಶಿ ಅನಿಲ್ ಚೌಧರಿ, ಮಧ್ಯಪ್ರದೇಶ ಕಾರ್ಯದರ್ಶಿ ಸುಧೀರ್ ಚೌಧರಿ ಹಾಗೂ ಹರಿಯಾಣ ಕಾರ್ಯದರ್ಶಿ ಸತ್ಯವೀರ್ ಯಾದವ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಈಗಾಗಲೇ ಹಲವು ಜಿಲ್ಲಾ ಸಮಿತಿಗಳನ್ನು ವಜಾಗೊಳಿಸಿರುವ ಕಾಂಗ್ರೆಸ್, ಬೇರು ಮಟ್ಟದಿಂದ ಪಕ್ಷವನ್ನು ಸಂಘಟಿಸಲು ಮುಂದಾಗಿದೆ. ಇದೀಗ ವಿವಿಧ ರಾಜ್ಯಗಳ ನಾಯಕರು ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದು, ರಾಹುಲ್ ಹೊಸ ತಂಡ ಕಟ್ಟುವಲ್ಲಿ ಅವರ ಸಾಥ್ ನೀಡುವುದಾಗಿ ಘೋಷಿಸಿದ್ದಾರೆ.