Asianet Suvarna News Asianet Suvarna News

ನೀರಿಲ್ಲದೇ ಜೀವ ಬಿಡುತ್ತಿವೆ ಪಕ್ಷಿಗಳು!

ನೀರಿಲ್ಲದೇ ಜೀವ ತೆತ್ತುತ್ತಿವೆ ಪಕ್ಷಿಗಳು| ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬಿಸಿಲ ತಾಪಕ್ಕೆ ಪ್ರಾಣಿ-ಪಕ್ಷಿಗಳು ನಿತ್ರಾಣ| ನೀರು, ಆಹಾರ ಲಭಿಸದೆ ಪರದಾಟ| ನಿರ್ಜಲೀಕರಣದಿಂದ ಪ್ರಾಣ ಬಿಡುತ್ತಿರುವ ಪಕ್ಷಿಗಳು| ಕಾಂಕ್ರೀಟ್‌ ಕಾಡಿನಿಂದ ಕಂಗೆಟ್ಟಿರುವ ಮೂಕಜೀವಿಗಳು

sever summer eater scarcity taking a toll on city s bird life
Author
Bangalore, First Published Mar 19, 2019, 12:16 PM IST

ಬೆಂಗಳೂರು[ಮಾ.19]: ಉದ್ಯಾನ ನಗರಿ ಬೆಂಗಳೂರಿನಲ್ಲಿ ಈ ಬಾರಿ ತುಸು ಹೆಚ್ಚಾಗಿರುವ ಬಿಸಿಲಿನ ಝಳಕ್ಕೆ ಕುಡಿಯಲು ನೀರು ಹಾಗೂ ಆಹಾರ ಸಿಗದೆ ಹೈರಾಣಾಗಿರುವ ಪುಟ್ಟಪ್ರಾಣಿ-ಪಕ್ಷಿಗಳು ನಿರ್ಜಲೀಕರಣಕ್ಕೆ ಒಳಗಾಗಿ ನಿತ್ರಾಣಗೊಳ್ಳುವುದರ ಜತೆಗೆ ಸಾವನ್ನಪ್ಪುತ್ತಿರುವ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ.

ಬಿಸಿಲಿನ ಧಗೆ ಮಾತ್ರವಲ್ಲದೇ ಜನಸಾಮಾನ್ಯರು ಪಕ್ಷಿಗಳಿಗೆ ಹಾಕುವ ಆಹಾರ ಕೂಡ ಅವುಗಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಇನ್ನೊಂದೆಡೆ ನಗರದ ಕೆರೆಗಳು ಕಲುಷಿತಗೊಂಡಿದ್ದು, ನೀರು, ಆಹಾರ ಅರಸಿ ಉದ್ಯಾನವನ, ವಸತಿ ಪ್ರದೇಶಗಳಿಗೆ ಲಗ್ಗೆ ಇಡುತ್ತಿವೆ. ಒಂದು ಪ್ರದೇಶದಿಂದ ಇನ್ನೊಂದೆಡೆಗೆ ಹಾರುವಾಗ ಬಿಸಿಲಿನ ಧಗೆಗೆ ಅವುಗಳ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ ನಿರ್ಜಲೀಕರಣದಿಂದಾಗಿ ಪಕ್ಷಿಗಳು ನಿತ್ರಾಣ ಹೊಂದುತ್ತಿವೆ. ಹೀಗೆ ನಿತ್ರಾಣಗೊಂಡ ಪಕ್ಷಿಗಳಲ್ಲಿ ನೀರು ಸಿಗದೆ ಹಲವು ಪ್ರಾಣವನ್ನೇ ಬಿಡುತ್ತಿವೆ.

ಫ್ಲಾಟ್ ನಿಂದ ಹಕ್ಕಿಗಳಿಗೆ ಆಹಾರ, ನೀರು ತಪ್ಪು: ಸುಪ್ರೀಂಕೋರ್ಟ್‌

ನಿತ್ಯ 60-70 ಕರೆ:

ಹೀಗೆ ಆಪತ್ತಿಗೆ ಸಿಲುಕಿರುವ ಪ್ರಾಣಿ-ಪಕ್ಷಿಗಳ ಸಂರಕ್ಷಿಸುವಂತೆ ವನ್ಯಪಾಲಕರಿಗೆ ಪ್ರತಿದಿನ 60-70ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಫೆಬ್ರವರಿ ಹಾಗೂ ಮಾಚ್‌ರ್‍ನಲ್ಲಿ ನಿತ್ರಾಣಗೊಂಡು ಆಪತ್ತಿನಲ್ಲಿರುವ 300ಕ್ಕೂ ಹೆಚ್ಚು ಪಕ್ಷಿಗಳನ್ನು ಸಂರಕ್ಷಿಸಲಾಗಿದೆ. ಆದರೆ, ಕೆಲವೊಮ್ಮೆ ನಾವು ಸ್ಥಳಕ್ಕೆ ಹೋಗುವಷ್ಟರಲ್ಲಿ ಪಕ್ಷಿಗಳು ಸಾವನ್ನಪ್ಪಿರುತ್ತವೆ. ಪಕ್ಷಿಗಳು ಸಂಕಷ್ಟದಲ್ಲಿರುವುದನ್ನು ಕಂಡ ಜನರು ಕರೆ ಮಾಡುತ್ತಾರೆ. ಆದರೆ, ಎಷ್ಟೋ ಪಕ್ಷಿಗಳ ಸಾವು ಲೆಕ್ಕಕ್ಕೆ ಸಿಗುವುದಿಲ್ಲ ಎನ್ನುತ್ತಾರೆ ವನ್ಯಜೀವಿ ಸಂರಕ್ಷಕರು.

ಮುಂಜಾನೆ ಪಾರ್ಕ್ಗಳಿಗೆ ವಾಕಿಂಗ್‌ ಹೋಗುವವರು ಪಕ್ಷಿಗಳಿಗೆ ಮನೆಯಲ್ಲಿ ಕರಿದ ಆಹಾರ ಪದಾರ್ಥಗಳು, ಹುರಿಗಡಲೆ, ಖಾರ ಬೂಂದಿ ಹಾಕುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇದನ್ನು ತಿಂದ ಪಕ್ಷಿಗಳಲ್ಲಿ ಅಜೀರ್ಣದ ಸಮಸ್ಯೆ ಉಂಟಾಗುತ್ತದೆ. ಆ ಸಮಯಕ್ಕೆ ಕುಡಿಯಲು ನೀರು ಸಿಗದೆ ದಾಹ ಹೆಚ್ಚಾಗಿ ಸಾವನ್ನಪ್ಪುತ್ತಿವೆ. ಮಾಚ್‌ರ್‍-ಏಪ್ರಿಲ್‌ ತಿಂಗಳಿನಲ್ಲಿ ಸಾಕು ಪಕ್ಷಿಗಳಿಗೆ ಸನ್‌ ಸ್ಟೊ್ರೕಕ್‌, ಚಿಕನ್‌ ಪಾಕ್ಸ್‌ ಉಂಟಾಗುವ ಸಾಧ್ಯತೆ ಹೆಚ್ಚು. ಅದರಲ್ಲೂ ಪಾರಿವಾಳಗಳಿಗೆ ಪ್ಯಾರಲಿಸಿಸ್‌ ಬರುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ಪಕ್ಷಿ ತಜ್ಞರು.

ನಗರದಲ್ಲಿ ಅಭಿವೃದ್ಧಿ ನೆಪದಲ್ಲಿ ಮರಗಳ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಅರಣ್ಯ ಪ್ರದೇಶ ಕಣ್ಮರೆಯಾಗಿ, ಎಲ್ಲೆಡೆಯೂ ಕಾಂಕ್ರಿಟ್‌ಮಯವಾಗಿರುವುದು ಪ್ರಾಣಿ-ಪಕ್ಷಿಗಳು, ಸರಿಸೃಪಗಳ ಆವಾಸಸ್ಥಾನಕ್ಕೆ ಕುತ್ತು ತಂದಿದೆ. ಇಂದಿನ ದಿನಮಾನಗಳಲ್ಲಿ ಮೈನಾ ಸಂತತಿಯೂ ಕಡಿಮೆಯಾಗುತ್ತಿದೆ. ಹಾಗಾಗಿ ಮನೆಗಳ ಮೇಲೆ ಪಕ್ಷಿಗಳಿಗೆ ನೀರು, ಧಾನ್ಯಗಳನ್ನು ಇಟ್ಟು ಜೀವಸಂತತಿ ರಕ್ಷಿಸಬೇಕು ಎಂದು ಪಕ್ಷಿ ತಜ್ಞರು ಮನವಿ ಮಾಡಿದ್ದಾರೆ.

ವಸತಿ ಪ್ರದೇಶಗಳತ್ತ ಉರಗಗಳು

ಬೇಸಿಗೆ ಹಾವುಗಳಿಗೆ ಸಂತಾನೋತ್ಪತ್ತಿಯ ಕಾಲ. ನಗರೀಕರಣದಿಂದಾಗಿ ಉರಗಗಳ ಸಂತಾನೋತ್ಪತ್ತಿಗೆ ತೊಂದರೆ ಉಂಟಾಗುತ್ತಿದೆ. ಮನೆಯ ಕಾಂಪೌಂಡ್‌, ಚಪ್ಪಲಿ ಗೂಡು, ಗ್ಯಾರೇಜ್‌, ಉದ್ಯಾನದಲ್ಲಿ ಸೇರಿಕೊಳ್ಳುತ್ತಿವೆ. ನಾಗರಬಾವಿ, ರಾಜಾರಾಜೇಶ್ವರಿನಗರ, ಜೆ.ಪಿ.ನಗರ, ಕೆಂಗೇರಿ, ಮಹದೇವಪುರ, ರಾಮಮೂರ್ತಿನಗರ, ಬಾಣಸವಾಡಿ ಸೇರಿದಂತೆ ವಿವಿಧೆಡೆ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಬಿಬಿಎಂಪಿ ವಲಯವಾರು ದಿನಕ್ಕೆ 15-20 ಕರೆಗಳು ಬರುತ್ತಿವೆ. ಬಿಸಿಲ ಪ್ರಮಾಣ ಹೆಚ್ಚಾ​ದಂತೆಲ್ಲ ಹಾವು​ಗಳ ಆವಾ​ಸ ಸ್ಥಾನ​ಗ​ಳಲ್ಲಿ ತಾಪ​ಮಾನ ಹೆಚ್ಚುವುದರಿಂದ ವಸತಿ ಪ್ರದೇಶಗಳಿಗೆ ಬರುತ್ತಿವೆ. ಜನರು ಮೊ.9902794711 ಕರೆ ಮಾಡಿದ್ದಲ್ಲಿ ರಕ್ಷಿಸಲಾಗುವುದು ಎಂದು ಬಿಬಿಎಂಪಿ ಅರಣ್ಯ ಘಟಕ ವನ್ಯಜೀವಿ ಸಂರಕ್ಷಕ ಪ್ರಸನ್ನಕುಮಾರ್‌ ತಿಳಿಸಿದರು.

ಉಚಿತವಾಗಿ ಮಣ್ಣಿನ ತಟ್ಟೆ ವಿತರಣೆ

ಜನರ ದಾಹ ತೀರಿಸಲು ಕೆಲವರು ಪ್ರತಿನಿತ್ಯ ಅಂಗಡಿಗಳು, ಮನೆಗಳ ಮುಂದೆ ಮಡಿಕೆಗಳಲ್ಲಿ ನೀರು ತುಂಬಿ ಇಡುತ್ತಿದ್ದಾರೆ. ಕೆಲವರು ಕಾಂಪೌಂಡ್‌, ಟೆರೆಸ್‌ನಲ್ಲಿ ಪಕ್ಷಿಗಳಿಗೆ ಮಣ್ಣಿನ ಬೋಗುಣಿಯಲ್ಲಿ ನೀರಿಡುತ್ತಿದ್ದಾರೆ. ರಾಜಾಜಿನಗರದ ಸಮರ್ಪಣಾ ಸಂಸ್ಥೆ ‘ಪಕ್ಷಿಗಳಿಗೆ ಒಂದು ಗುಟುಕು ನೀರು’ ಶೀರ್ಷಿಕೆಯಡಿ ಉಚಿತವಾಗಿ ಮಣ್ಣಿನ ತಟ್ಟೆ(ಬೋಗುಣಿ)ಗಳನ್ನು ಜನರಿಗೆ ಹಂಚುತ್ತಿದೆ. ಆಸಕ್ತರು ಶಿವಕುಮಾರ್‌ ಹೊಸಮನಿ, ಸಮರ್ಪಣಾ, ನಂ. 7/ಬಿ, 19 ಸಿ ಮುಖ್ಯರಸ್ತೆ, 1ನೇ ವಿಭಾಗ, ವಿದ್ಯಾವರ್ಧಕ ಸಂಘದ ಶಾಲೆ ಎದುರು, ರಾಜಾಜಿನಗರ ಅಥವಾ ಮೊ. 9606402979 ಸಂಪರ್ಕಿಸಬಹುದು.

-ಕಾವೇರಿ ಎಸ್‌.ಎಸ್‌.

Follow Us:
Download App:
  • android
  • ios