ಬೆಳಗ್ಗೆಯಿಂದಲೇ ಡೈರಿ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಚರ್ಚೆಗೆ ಪಟ್ಟುಹಿಡಿದಿದ್ದಾರೆ. ಡೈರಿ ವಿಚಾರ ಚರ್ಚಿಸುವಂತೆ ಮನವಿ ಮಾಡಿಕೊಂಡರೂ ಸ್ಪೀಕರ್ ಚರ್ಚೆಗೆ ಅವಕಾಶ ನೀಡಲಿಲ್ಲ.
ಬೆಂಗಳೂರು (ಮಾ.16): ಕಾಂಗ್ರೆಸ್ ಹೈಕಮಾಂಡ್'ಗೆ ಕಪ್ಪ ನೀಡಿದ ಬಗ್ಗೆ ಗೋವಿಂದರಾಜು ಡೈರಿ ವಿಚಾರಕ್ಕೆ 2ನೇ ದಿನದ ವಿಧಾನಸಭೆ ಕಲಾಪ ಬಲಿಯಾಗಿದೆ.
ಬೆಳಗ್ಗೆಯಿಂದಲೇ ಡೈರಿ ವಿಚಾರ ಪ್ರಸ್ತಾಪಿಸಿದ ಬಿಜೆಪಿ ಸದಸ್ಯರು ಚರ್ಚೆಗೆ ಪಟ್ಟುಹಿಡಿದಾಗ, ಆಡಳಿತ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದರು. ನಿಲುವಳಿ ಸೂಚನೆಯಡಿ ಈ ವಿಷಯ ಚರ್ಚೆಗೆ ಬರುವುದಿಲ್ಲ ಎಂದು ವಿಧಾನಸಭೆಯಲ್ಲಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಆದರೆ ಪಟ್ಟು ಸಡಿಲಿಸದ ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಡೈರಿ ವಿಚಾರ ಚರ್ಚಿಸುವಂತೆ ಮನವಿ ಮಾಡಿಕೊಂಡರೂ ಸ್ಪೀಕರ್ ಚರ್ಚೆಗೆ ಅವಕಾಶ ನೀಡಲಿಲ್ಲ. ಕೊನೆಗೆ ಪ್ರತಿಪಕ್ಷಗಳ ಸದಸ್ಯರು ಗೋವಿಂದ ಗೋವಿಂದ ಎಂದು ಘೋಷಣೆ ಕೂಗುತ್ತಾ ಹೊರ ನಡೆದರು. ಸ್ಪೀಕರ್ ಕೋಳಿವಾಡ ಕೆಲಕಾಲ ಸದನ ಮುಂದೂಡಿದರು. ಇದೇ ವಿಚಾರಕ್ಕೆ ಸಂಜೆ ವಿಪಕ್ಷ ನಾಯಕ ಶೆಟ್ಟರ್ ಪಟ್ಟು ಹಿಡಿದುದರಿಂದ ಕಲಾಪ ನಾಳೆಗೆ ಮುಂದೂಡಲಾಯಿತು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, ನಿಯಮ 60 ಅಡಿ ನಿಲುವಳಿ ಸೂಚನೆ ಮಂಡಿಸಿದ್ದೆವು. ಗೋವಿಂದ ರಾಜ್ ಮನೆಯಲ್ಲಿ ಡೈರಿ ಸಿಕ್ಕ ವಿಚಾರ ದೇಶದಾದ್ಯಂತ ಸಾಕಷ್ಟು ಚರ್ಚೆ ಆಗುತ್ತಿದೆ. ಆದರೆ ಸದನದಲ್ಲಿ ಸ್ಪೀಕರ್ ಪ್ರಶ್ನೋತ್ತರ ಅವಧಿ ಮುಗಿದ ಮೇಲೆ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದರೂ ಸ್ಪೀಕರ್ ಮನವಿಯನ್ನು ತಿರಸ್ಕರಿಸಿದರು. ಸ್ಪೀಕರ್ ಅವಕಾಶ ನೀಡದ್ದನ್ನೆ ಪ್ರಶ್ನಿಸಿ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು.
