ನವದೆಹಲಿ[ಮೇ.21]: ದೆಹಲಿ ಮೆಟ್ರೋನ ಯೆಲ್ಲೋ ಲೈನ್ ಮೆಟ್ರೋ ಇಂದು ಬೆಳಗ್ಗೆ ತಾಂತ್ರಿಕ ದೋಷದಿಂದ ದಾರಿ ಮಧ್ಯೆ ಸ್ಥಗಿತಗೊಂಡಿದೆ. ಇದರಿಂದಾಗಿ ಸಾವಿರಾರು ಪ್ರಯಾಣಿಕರು ಸಮಸ್ಯೆ ಅನುಭವಿಸಿದ್ದಾರೆ ಹಾಗೂ ಕಾಲ್ನಡಿಗೆಯಲ್ಲೇ ನಿಲ್ದಾಣ ಸೇರಿದ್ದಾರೆ. ಪ್ರಯಾಣಿಕರು ಹಳಿಯ ಮೇಲೆ ನಡೆದುಕೊಂಡು ಬರುತ್ತಿರುವುದನ್ನು ಕಂಡ ಇತರ ಪ್ರಯಾಣಿಕರು ಈ ದೃಶ್ಯಗಳನ್ನು ತಮ್ಮ ಫೋನ್ ಗಳಲ್ಲಿ ಸೆರೆ ಹಿಡಿದಿದ್ದಾರೆ. ಮೆಟ್ರೋ ಸೇವೆ ಆರಂಭವಾದಾಗಿನಿಂದ ಇಂತಹ ಘಟನೆ ನಡೆದಿದ್ದು ಇದೇ ಮೊದಲ ಬಾರಿ ಎಂಬುವುದು ಗಮನಾರ್ಹ.

ಯೆಲ್ಲೋ ಲೈನ್ ಮೆಟ್ರೋ ದೆಹಲಿಯ ಸಮಯ್ಪುರ್ ಬಾದಲಿಯಿಂದ ಹರ್ಯಾಣದ ಹುಡಾ ಸಿಟಿ ಸೆಂಟರ್ ನಡುವೆ ಓಡಾಟ ನಡೆಸುತ್ತದೆ. ತಾಂತ್ರಿಕ ದೋಷದಿಂದಾಗಿ ಪ್ರಯಾಣಿಕರು ನಿಲ್ದಾಣ ತಲುಪಲು ಹರ ಸಾಹಸ ಪಟ್ಟಿದ್ದಾರೆ. ಇನ್ನು ಕೆಲವರು ಕುತುಬ್ ಮಿನಾರ್ ಸ್ಟೇಷನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಮೆಟ್ರೋ ಸ್ಥಗಿತಗೊಂಡ ಪರಿಣಾಮ ಜನರು ಟ್ರಕ್ ಗಳಲ್ಲಿ ನಿಂತು ಹೋದ ದಶ್ಯಗಳೂ ಸಾಮಾನ್ಯವಾಗಿತ್ತು.

ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಈ ಸಮಸ್ಯೆ ಎದುರಾಗಿದೆ. ಸುಲ್ತಾನ್ಪುರ್ ಬಳಿ ವಿದ್ಯುತ್ ತಂತಿ ಕಡಿತಗೊಂಡ ಪರಿಣಾಮ ಯೆಲ್ಲೋ ಲೈನ್ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದವರನ್ನು ತುರ್ತು ನಿರ್ಗಮನ ಬಾಗಿಲಿನ ಮೂಲಕ ಹೊರ ಕರೆತರಲಾಗಿದೆ.