Asianet Suvarna News Asianet Suvarna News

ವೀರಶೈವ-ಲಿಂಗಾಯತ ಸಂಧಾನ ಖತಂ!

ರಚನೆಯಾಗದ ತಜ್ಞರ ಸಮಿತಿ | ಇನ್ನು ಮಾತುಕತೆಯೂ ಇಲ್ಲ | ಉಭಯ ಬಣಗಳಿಂದ ಸರ್ಕಾರಕ್ಕೆ ಪ್ರತ್ಯೇಕ ವರದಿಗೆ ತೀರ್ಮಾನ

Separate Lingayat Religion Talks Fail

ಬೆಂಗಳೂರು: ಸ್ವತಂತ್ರ ಧರ್ಮ ಸ್ಥಾಪನೆ ವಿಚಾರದಲ್ಲಿ ಒಮ್ಮತ ಸಾಧಿಸಲು ಮುಂದಾಗಿದ್ದ ವೀರಶೈವ -ಲಿಂಗಾಯತ ಬಣಗಳ ನಡುವಣ ಸಂಧಾನ ಮುರಿದು ಬಿದ್ದಿದೆ. ಎರಡೂ ಬಣಗಳು ಪ್ರತ್ಯೇಕವಾಗಿ ತಮ್ಮ ತಮ್ಮ ವಾದಗಳಿಗೆ ಅನುಗುಣವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿವೆ.

ಎರಡೂ ಬಣಗಳ ತಲಾ ಐವರು ಸದಸ್ಯರನ್ನು ಒಳಗೊಂಡ ತಜ್ಞರ ಸಮಿತಿ ರಚಿಸಿ, ಸಮಿತಿ ಶಿಫಾರಸಿನ ಅನ್ವಯ ಒಮ್ಮತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಕೆಗೆ ತೆಗೆದುಕೊಂಡಿದ್ದ ತೀರ್ಮಾನದಿಂದ ಎರಡೂ ಬಣಗಳು ಹಿಂದೆ ಸರಿದಿದ್ದು, ನಿಮ್ಮ ದಾರಿಗೆ ನಿಮಗೆ-ನಮ್ಮ ದಾರಿ ನಮಗೆ ಎಂಬ ತೀರ್ಮಾನಕ್ಕೆ ಬಂದಿವೆ.

ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ಕಳೆದ ವಾರ ನಡೆದಿದ್ದ ಸಭೆಯಲ್ಲಿ ಭಾರಿ ವಾದ-ಪ್ರತಿವಾದಗಳ ಹೊರತಾಗಿಯೂ ಒಮ್ಮತಕ್ಕೆ ಬರಲು ಎರಡೂ ಬಣಗಳ ತಲಾ ಐವರು ಸದಸ್ಯರ ತಜ್ಞರ ಸಮಿತಿ ರಚನೆಗೆ ನಿರ್ಧರಿಸಲಾಗಿತ್ತು. ಆದರೆ ತಜ್ಞರ ರಚನೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದ್ದು, ಎರಡೂ ಬಣಗಳು ಇನ್ನು ಮುಂದೆ ಮಾತುಕತೆ ನಡೆಸದಿರುವ ನಿರ್ಧಾರಕ್ಕೆ ಬಂದಿವೆ ಎಂದು ಉಭಯ ಬಣಗಳ ಆಂತರಿಕ ಮೂಲಗಳು ತಿಳಿಸಿವೆ.

ತಜ್ಞರ ಸಮಿತಿ ರಚನೆ ಮಾಡಬೇಕೆಂಬ ತೀರ್ಮಾನ ಆಗಿತ್ತು. ಈಗ ಸಮಿತಿ ರಚನೆಗೆ ಎಲ್ಲರೂ ಬೇಡ ಎನ್ನುತ್ತಿದ್ದಾರೆ. ಹೀಗಾಗಿ ಸಮಿತಿನೂ ಇಲ್ಲ, ಮಾತುಕತೆನೂ ಇಲ್ಲ. ಮುಂದೆ ಏನಾಗುತ್ತೋ ನೋಡೋಣ. ನಾನೂ ಏನು ಮಾಡಬೇಕೆಂದು ಯೋಚನೆ ಮಾಡಿಲ್ಲ.

ಶಾಮನೂರು ಶಿವಶಂಕರಪ್ಪ, ವೀರಶೈವ ಮಹಾಸಭಾ ಅಧ್ಯಕ್ಷ

ಧರ್ಮ ಸಂಘರ್ಷ ಶಮನಗೊಳ್ಳದಿರಲು ಕಾರಣಗಳು:

1. ಕಳೆದ ವಾರ ನಡೆದಿದ್ದ ಸಭೆಯಲ್ಲಿ ತಜ್ಞರ ವರದಿ ಆಧಾರವಾಗಿಟ್ಟುಕೊಂಡು ಮುಂದಿನ ನಡೆ ನಿರ್ಧರಿಸೋಣ ಎಂಬ ತೀರ್ಮಾನ ಬರಲಾಗಿತ್ತು. ತಲಾ ಬಣಗಳ ಐವರು ಸದಸ್ಯರ ಸಮಿತಿ ರಚಿಸಬೇಕು, ಆ ಸಮಿತಿ ಪಾರದರ್ಶಕವಾಗಿ ತಮ್ಮ ತಮ್ಮ ವಾದಗಳ ಆಧಾರಗಳನ್ನು ಸಮಿತಿ ಮುಂದಿಟ್ಟು ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಈ ಮಧ್ಯೆ ಎರಡೂ ಬಣಗಳು ತಮ್ಮ ತಮ್ಮ ವಾದಕ್ಕೆ ಕಟಿಬದ್ಧರಾದರೆ ಮತಕ್ಕೆ ಹಾಕಬೇಕು, ಒಂದು ವೇಳೆ ಮತಗಳು 5-5 ಎಂದಾದರೆ ವೀರಶೈವ ಮಹಾಸಭಾದ ಅಧ್ಯಕ್ಷರು ವಿಟೋ ಪವರ್ ಚಲಾವಣೆ ಮಾಡುವ ಮೂಲಕ ನಿರ್ಧಾರಕ್ಕೆ ಬರಬೇಕು ವಾದವನ್ನು ವೀರಶೈವ ಬಣ ಮುಂದಿಟ್ಟಿತು. ಇದಕ್ಕೆ ಲಿಂಗಾಯತ ಬಣ ತೀವ್ರ ವಿರೋಧ ವ್ಯಕ್ತಪಡಿಸಿ, ಲಿಂಗಾಯತ ಎಂಬುದನ್ನು ಒಮ್ಮತದಿಂದ ಒಪ್ಪಿಕೊಳ್ಳಿ, ಇಲ್ಲದಿದ್ದರೆ ನಿಮ್ಮ ದಾರಿ ನಿಮಗೆ-ನಮ್ಮ ದಾರಿ ನಮಗೆ ಎಂಬ ಸಂದೇಶ ರವಾನಿಸಿದೆ.

2. ತಜ್ಞರ ಸಮಿತಿ ರಚನೆ ಮಾಡಿದಾಗ ಲಿಂಗಾಯತ ಎಂಬ ವಾದಕ್ಕೆ ಹೆಚ್ಚು ಪುಷ್ಟಿ ಬಂದರೆ ಅದನ್ನು ತಾವು ಸುತಾರಾಂ ಒಪ್ಪುವುದಿಲ್ಲ ಎಂದು ಪಂಚ ಪೀಠಾಧೀಶರು ವೀರಶೈವ ಮಹಾಸಭಾಕ್ಕೆ ಸಂದೇಶ ರವಾನಿಸಿದ್ದಾರೆ. ಇದರಿಂದ ವೀರಶೈವ ಬಣ ಗೊಂದಲಕ್ಕೆ ಸಿಲುಕಿದ್ದು, ತಜ್ಞರ ಸಮಿತಿ ರಚನೆಗೆ ಐವರು ಸದಸ್ಯರ ಹೆಸರುಗಳನ್ನು ಲಿಂಗಾಯತ ಬಣಕ್ಕೆ ನೀಡದೇ ತಟಸ್ಥವಾಗಿ ಉಳಿದಿದೆ. ಸಮಿತಿ ರಚನೆಯೇ ಇದರಿಂದ ರದ್ದಾಗಿದ್ದು, ಇನ್ನು ಮುಂದೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ. ಹೀಗಾಗಿ ಉಭಯ ಬಣಗಳು ಪ್ರತ್ಯೇಕವಾಗಿ ಮುನ್ನಡೆಯಲು ತೀರ್ಮಾನಿಸಿವೆ.

3. ಹಲವು ಸುತ್ತಿನ ಮಾತುಕತೆಗಳ ಬಳಿಕವೂ ಸಚಿವರಾದ ಎಂ.ಬಿ.ಪಾಟೀಲ್ ಮತ್ತು ವಿನಯ್ ಕುಲಕರ್ಣಿ ಅವರ ನೇತೃತ್ವದ ಲಿಂಗಾಯತ ಬಣವು ಲಿಂಗಾಯತ ಸ್ವತಂತ್ರ ಧರ್ಮ ರಚನೆಗಾಗಿ ಮುಂದಿನ ಹೋರಾಟ ರೂಪುರೇಷೆಗಳನ್ನು ನಿರಂತರ ಮಾಧ್ಯಮಗಳಲ್ಲಿ ಪುನರುಚ್ಚಾರ ಮಾಡುತ್ತಿರುವುದು ವೀರಶೈವ ಬಣದ ಅಸಮಾಧಾನಕ್ಕೆ ಕಾರಣವಾಗಿದೆ. ಒಂದೆಡೆ ಮಾತುಕತೆ ಪ್ರಯತ್ನ ನಡೆಯುತ್ತಿದ್ದರೂ ರ್ಯಾಲಿ, ಸಮಾವೇಶ, ಸಭೆಗಳು ಮತ್ತು ಧರ್ಮ ಇತಿಹಾಸದ ಕುರಿತಾಗಿ ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಿರುವುದು ಮಾತುಕತೆ ಮುರಿದು ಬೀಳಲು ಕಾರಣವಾಗಿದೆ.

4. ಒಂದು ವೇಳೆ ಒಮ್ಮತದ ಅಭಿಪ್ರಾಯಕ್ಕೆ ಬಂದು ಲಿಂಗಾಯತ ಧರ್ಮ ಸ್ಥಾಪನೆಯಾದರೆ ಶತಮಾನಗಳ ಇತಿಹಾಸ ಹೊಂದಿರುವ ಅಖಿಲ ಭಾರತ ವೀರಶೈವ ಮಹಾಸಭಾ ಅಪ್ರಸ್ತುತ ಆಗುತ್ತದೆ ಎಂಬ ಆತಂಕ ವೀರಶೈವ ಬಣದಲ್ಲಿ ವ್ಯಕ್ತವಾಗಿದೆ. ಹೀಗಾಗಿ ಒಮ್ಮತಕ್ಕೆ ಬಾರದಿದ್ದಲ್ಲಿ ರಾಜ್ಯ ಸರ್ಕಾರ ಕೂಡ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಸಮಿತಿ ರಚನೆಯಾಗಬೇಕಾಗುತ್ತದೆ. ಸರ್ಕಾರ ಸಮಿತಿ ರಚನೆ ಮಾಡಿ, ಅಧ್ಯಯನ ನಡೆಸಿ, ವರದಿ ಕೊಡಲು ಕನಿಷ್ಠ ಆರು ತಿಂಗಳಾದರೂ ಬೇಕಾಗಬಹುದು. ಅಷ್ಟೊತ್ತಿಗೆ ಚುನಾವಣೆಯೇ ಎದುರಾಗುವುದರಿಂದ ರಾಜ್ಯ ಸರ್ಕಾರ ಯಾವುದೇ ತೀರ್ಮಾನ ಪ್ರಕಟಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಒಮ್ಮತಕ್ಕೆ ಬರುವ ಬದಲು ತಿಕ್ಕಾಟ ಮುಂದುವರಿದರೇ ಲೇಸೆಂಬ ತೀರ್ಮಾನಕ್ಕೆ ವೀರಶೈವ ಬಣ ಬಂದಿರುವುದು.

5. ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ವಿನಯ್ ಕುಲಕರ್ಣಿ ನೇತೃತ್ವದ ಬಣವು ಲಿಂಗಾಯತ ಎಂಬ ಪದಕ್ಕೆ ಬದ್ಧರಾಗಿದ್ದು, ಯಾವುದೇ ಕಾರಣಕ್ಕೂ ವೀರಶೈವ ಬಣದ ಜತೆ ರಾಜಿಗೆ ಸಿದ್ಧರಿಲ್ಲ. ಹೀಗಾಗಿ ಶತಮಾನಗಳ ಹಳೆಯದಾದ ವೀರಶೈವ ಮಹಾಸಭಾ ಲಿಂಗಾಯತ ಬಣಕ್ಕೆ ಶರಣಾಗತಿ ಆಗಿದೆ ಎಂಬ ಸಂದೇಶ ಸಮಾಜಕ್ಕೆ ಹೋಗುತ್ತದೆ. ಹೀಗಾಗಿ ಯಾವ ಕಾರಣಕ್ಕೂ ಲಿಂಗಾಯತ ಬಣ ಹೇಳಿದಂತೆ ಕೇಳಿದ್ದೇವೆ ಎಂಬ ಮಾತು ಬಾರದಂತೆ ಎಚ್ಚರಿಕೆ ಹೆಜ್ಜೆ ಇಡಲು ಮಹಾಸಭಾ ಮುಂದಾಗಿರುವುದು.

 

 

Follow Us:
Download App:
  • android
  • ios