ತಿರುವನಂತಪುರ :  ನಂಬಿಕೆ ಹಾಗೂ ಕಾನೂನು ನಡುವಣ ಸಂಘರ್ಷದಿಂದಾಗಿ ಹೋರಾಟದ ಅಖಾಡವಾಗಿ ಬದಲಾಗಿರುವ ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಶುಕ್ರವಾರದಿಂದ ಯಾತ್ರಾ ಸೀಸನ್‌ ಆರಂಭವಾಗುತ್ತಿದ್ದು, ಸಂಜೆ 5 ಗಂಟೆಗೆ ದೇಗುಲದ ಬಾಗಿಲು ತೆರೆಯಲಿದೆ. ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು 550 ಮಹಿಳೆಯರು ನೋಂದಣಿ ಮಾಡಿಸಿಕೊಂಡಿರುವುದರಿಂದ ಶಬರಿಮಲೆಯಲ್ಲಿ ಸಂಘರ್ಷ ಮತ್ತಷ್ಟು ತೀವ್ರಗೊಳ್ಳಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ.

ಈ ನಡುವೆ, 10ರಿಂದ 50 ವರ್ಷದೊಳಗಿನ ಮಹಿಳೆಯರು ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಪ್ರತ್ಯೇಕ ದಿನಗಳಂದು ದರ್ಶನಕ್ಕೆ ವ್ಯವಸ್ಥೆ ಮಾಡುವ ಕುರಿತು ಕೇರಳ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಸಂಬಂಧ ದೇಗುಲದ ಮುಖ್ಯ ಅರ್ಚಕರು ಹಾಗೂ ಪಂದಳಂ ರಾಜಮನೆತನದ ಜತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮಾತನಾಡಿದ್ದಾರೆ. ‘ಈ ಬಗ್ಗೆ ಯೋಚಿಸಿ ತಿಳಿಸುತ್ತೇವೆ’ ಎಂದು ರಾಜಮನೆತನದ ಶಶಿಕುಮಾರ ವರ್ಮ ಹಾಗೂ ಮುಖ್ಯ ಅರ್ಚಕ ಕಾಂತರಾರು ರಾಜೀವರು ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಆದರೆ, ಶಬರಿಮಲೆ ಕಗ್ಗಂಟು ನಿವಾರಿಸಿ, ಶಾಂತಿಯುತವಾಗಿ ಯಾತ್ರೆ ನಡೆಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಗುರುವಾರ ನಡೆಸಿದ ಸರ್ವಪಕ್ಷ ಸಭೆ ವಿಫಲವಾಗಿದೆ.

ರಾಜಮನೆತನದ ಹೇಳಿಕೆಯಿಂದ ಆಶಾಕಿರಣ:

ಸರ್ವಪಕ್ಷ ಸಭೆ ನಡೆದ ಬೆನ್ನಲ್ಲೇ ವಿವಾದದ ಸಂಬಂಧ ದೇಗುಲದ ಮುಖ್ಯ ಅರ್ಚಕ ಕಾಂತರಾರು ರಾಜೀವರು ಹಾಗೂ ಪಂದಳಂ ರಾಜಮನೆತನದ ಮುಖ್ಯಸ್ಥ ಶಶಿಕುಮಾರ ವರ್ಮ ಅವರ ಜತೆ ಮುಖ್ಯಮಂತ್ರಿ ವಿಜಯನ್‌ ಪ್ರತ್ಯೇಕ ಮಾತುಕತೆ ನಡೆಸಿದರು.

ಈ ವೇಳೆ ವರ್ಮ ಹಾಗೂ ರಾಜೀವರು ಅವರು, ‘10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ದೇವಾಲಯಕ್ಕೆ ಪ್ರವೇಶ ನೀಡುವ ಆದೇಶವನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ವರ್ಗದ ಮಹಿಳೆಯರಿಗೂ ನಾವು ಇದೇ ಮನವಿ ಮಾಡುತ್ತೇವೆ’ ಎಂದು ಹೇಳಿದರು.

ಆಗ ವಿಜಯನ್‌ ಅವರು, ಈ ವಯೋಮಾನದ ಮಹಿಳೆಯರಿಗೆ ‘ಪ್ರತ್ಯೇಕ ದಿನಗಳಂದು ದರ್ಶನ’ ಮಾಡಿಸುವ ಪ್ರಸ್ತಾಪವನ್ನು ಇರಿಸಿದರು. ಈ ಬಗ್ಗೆ ಮಾತುಕತೆಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದ ರಾಜೀವರು ಹಾಗೂ ಶಶಿಕುಮಾರ ವರ್ಮ ಅವರು, ‘ನಾವು ಈ ಕುರಿತಂತೆ ಸಂಬಂಧಪಟ್ಟವರೊಂದಿಗೆ ಮಾತುಕತೆ ನಡೆಸಬೇಕಾಗುತ್ತದೆ. ಎಲ್ಲರ ಜತೆ ಸಮಾಲೋಚನೆ ನಡೆಸಿ ಬಳಿಕ ನಮ್ಮ ನಿರ್ಧಾರ ತಿಳಿಸುತ್ತೇವೆ’ ಎಂದರು. ಹೀಗಾಗಿ ೕ ಮಾತುಕತೆಗೆ ತಿರುವು ಪ್ರಾಪ್ತಿಯಾದಂತಾಗಿದೆ.

ಸರ್ವಪಕ್ಷ ಸಭೆ ವಿಫಲ:

ಇದಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯಲ್ಲಿ, ‘ಎಲ್ಲ ವಯೋಮಾನದ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂದು ಸೆ.28ರಂದು ತಾನು ನೀಡಿರುವ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮರುಪರಿಶೀಲನಾ ಅರ್ಜಿಗಳನ್ನು ಜ.22ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದೆ. ಹೀಗಾಗಿ ನ್ಯಾಯಾಲಯದ ತೀರ್ಪು ಜಾರಿಯನ್ನು ಅಲ್ಲಿವರೆಗೂ ಮುಂದೂಡಬೇಕು. ತನ್ಮೂಲಕ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು’ ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು ಕೇರಳ ಸರ್ಕಾರ ತಳ್ಳಿ ಹಾಕಿತು.

ಮೇಲ್ಮನವಿ ವಿಚಾರಣೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಾಲಯ ಹೇಳಿದ್ದರೂ, ತೀರ್ಪಿಗೆ ತಡೆಯನ್ನೇನೂ ಕೊಟ್ಟಿಲ್ಲ. ಹೀಗಾಗಿ 10ರಿಂದ 50 ವರ್ಷದೊಳಗಿನ ಮಹಿಳೆಯರು ಯಾತ್ರೆ ಕೈಗೊಂಡರೆ ಅವರಿಗೆ ಅವಕಾಶ ನೀಡುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ ಎಂದು ಮೂರು ತಾಸುಗಳ ಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಹಾಗೂ ಬಿಜೆಪಿ ಸದಸ್ಯರು ಸಭೆಯಿಂದ ಹೊರನಡೆದರು. ಈ ನಡುವೆ, ಶಬರಿಮಲೆ ದೇಗುಲದ ಜತೆ ಸಾಂಪ್ರದಾಯಿಕವಾಗಿ ನಂಟು ಹೊಂದಿರುವ ಪಂದಲಂ ರಾಜಮನೆತನ ಹಾಗೂ ಅರ್ಚಕರ ಕುಟುಂಬದ ಜತೆ ಮುಖ್ಯಮಂತ್ರಿಗಳು ಸಭೆ ನಡೆಸಿದರು.

ಇದು 3ನೇ ಬಾರಿ:

ಎಲ್ಲ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಬಹುದು ಎಂಬ ಸುಪ್ರೀಂಕೋರ್ಟ್‌ ತೀರ್ಪಿನ ಬಳಿಕ ಎರಡು ಬಾರಿ ದೇಗುಲದ ಬಾಗಿಲು ತೆರೆದಿತ್ತು. ಮಹಿಳೆಯರು ಪ್ರವೇಶಕ್ಕೆ ಯತ್ನಿಸಿದ್ದರಾದರೂ ಅಯ್ಯಪ್ಪ ಭಕ್ತರ ತೀವ್ರ ವಿರೋಧದಿಂದಾಗಿ ಸಾಧ್ಯವಾಗಿರಲಿಲ್ಲ. ತೀವ್ರ ಸಂಘರ್ಷವೇ ಏರ್ಪಟ್ಟಿತ್ತು. ಶಬರಿಮಲೆಯನ್ನು ಪೊಲೀಸ್‌ ಭದ್ರಕೋಟೆಯಾಗಿ ಪರಿವರ್ತಿಸಲಾಗಿತ್ತು. ಮೊದಲನೆ ಬಾರಿ ಆರು ದಿನ ಹಾಗೂ ಎರಡನೆ ಬಾರಿ ಕೇವಲ ಎರಡು ದಿನವಷ್ಟೇ ದೇಗುಲ ತೆರೆದಿತ್ತು. ಆದರೆ ಈ ಬಾರಿ ಒಂದೂವರೆ ತಿಂಗಳ ಕಾಲ ಯಾತ್ರೆ ನಡೆಯುವುದರಿಂದ ಹಾಗೂ ದೇಗುಲ ಪ್ರವೇಶಿಸಲು ಮಹಿಳೆಯರು ಯತ್ನಿಸುತ್ತಿರುವುದರಿಂದ ಸಂಘರ್ಷ ಏರ್ಪಡುವ ಸಾಧ್ಯತೆ ಇದೆ.

ಮಹಾರಾಷ್ಟ್ರದ ಶನಿಶಿಂಗಣಾಪುರದ ದೇಗುಲಕ್ಕೆ ಮಹಿಳೆಯರು ಪ್ರವೇಶಿಸುವ ಸಂಬಂಧ ಹೋರಾಟ ನಡೆಸಿ ಯಶಸ್ವಿಯಾಗಿರುವ ತೃಪ್ತಿ ದೇಸಾಯಿ ಅವರು ನ.17ರಂದು ಅಯ್ಯಪ್ಪ ದೇಗುಲಕ್ಕೆ ತಾವು ಭೇಟಿ ನೀಡಲಿದ್ದು, ಸೂಕ್ತ ಭದ್ರತೆ ನೀಡಬೇಕು ಎಂದು ಈಗಾಗಲೇ ಮನವಿ ಮಾಡಿದ್ದಾರೆ.

ಬೆದರಿಕೆ:

ಈ ನಡುವೆ, ಶಬರಿಮಲೆಗೆ ಮಹಿಳಾ ಪ್ರವೇಶ ಬೆಂಬಲಿಸಿದ ಲೇಖಕ ಸುನೀಲ್‌ ಎಲಿಯದೋಂ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದ್ದು, ಅವರಿಗೆ ಸರ್ಕಾರ ಭದ್ರತೆ ಒದಗಿಸಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.