Asianet Suvarna News Asianet Suvarna News

ಕಾಂಗ್ರೆಸ್‌ ಹಿರಿಯರಿಗೆ ಮಂತ್ರಿಗಿರಿ ತಪ್ಪಿದ್ದೇಕೆ?

ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನೇಕರು ಈಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಬೇಸರ, ಆಕ್ರೋಶ ಹೊರಹಾಕುತ್ತಿದ್ದಾರೆ. ಹುದ್ದೆ ತಪ್ಪಲು ಇತರ ನಾಯಕರ ಮೇಲೆ ಆರೋಪವನ್ನೂ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ನೀಡಲು ಬಳಸಿದ ಮಾನದಂಡಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಮಂತ್ರಿಗಿರಿ ಸ್ಥಾನ ತಪ್ಪಲು ಆಯಾ ಶಾಸಕರ ಸ್ವಯಂಕೃತ ತಪ್ಪುಗಳೂ ಕಾರಣ ಎನ್ನುತ್ತವೆ ಹೈಕಮಾಂಡ್‌ ಮೂಲಗಳು.

Senior Leaders Not Get Ministerial Post In Karnataka

ರಾಕೇಶ್‌ ಎನ್‌.ಎಸ್‌.

ನವದೆಹಲಿ :  ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಅನೇಕರು ಈಗ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಬೇಸರ, ಆಕ್ರೋಶ ಹೊರಹಾಕುತ್ತಿದ್ದಾರೆ. ಹುದ್ದೆ ತಪ್ಪಲು ಇತರ ನಾಯಕರ ಮೇಲೆ ಆರೋಪವನ್ನೂ ಮಾಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನ ನೀಡಲು ಬಳಸಿದ ಮಾನದಂಡಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ ಮಂತ್ರಿಗಿರಿ ಸ್ಥಾನ ತಪ್ಪಲು ಆಯಾ ಶಾಸಕರ ಸ್ವಯಂಕೃತ ತಪ್ಪುಗಳೂ ಕಾರಣ ಎನ್ನುತ್ತವೆ ಹೈಕಮಾಂಡ್‌ ಮೂಲಗಳು.

ಎಚ್‌.ಕೆ. ಪಾಟೀಲ್‌, ರೋಷನ್‌ ಬೇಗ್‌, ಶಾಮನೂರು ಶಿವಶಂಕರಪ್ಪ, ರಾಮಲಿಂಗಾ ರೆಡ್ಡಿ, ಎಂ.ಬಿ. ಪಾಟೀಲ್‌, ಎಸ್‌. ಆರ್‌. ಪಾಟೀಲ್‌, ಎಚ್‌.ಎಂ. ರೇವಣ್ಣ ಮತ್ತಿತರರು ಸಚಿವರಾಗಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದರೂ ಅವರ ಜಿಲ್ಲೆ ಅಥವಾ ಅವರ ಕ್ಷೇತ್ರದ ಅಕ್ಕಪಕ್ಕದ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಾಧ್ಯವಾಗದ್ದು ಕಾಂಗ್ರೆಸ್‌ ಕೋಟಾದಲ್ಲಿ ಇವರಿಗೆ ಸಚಿವ ಸ್ಥಾನ ತಪ್ಪಲು ಪ್ರಮುಖ ಕಾರಣ ಎನ್ನುತ್ತಿವೆ ಈ ಮೂಲಗಳು.

ಸಚಿವ ಸ್ಥಾನ ಹಂಚಿಕೆ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ… ಗಾಂಧಿ ಅವರೊಂದಿಗೆ ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ಹಿಂದಿನ ಕಾಂಗ್ರೆಸ್‌ ಸರ್ಕಾರದ ಸಚಿವರ ಚುನಾವಣಾ ಸಾಧನೆ ಬಗ್ಗೆಯೂ ಪರಾಮರ್ಶೆ ನಡೆದಿತ್ತು. ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರಕ್ಕಷ್ಟೆಸೀಮಿತವಾಗಿರುವವರಿಗೆ ಮತ್ತೆ ಮತ್ತೆ ಸಚಿವ ಸ್ಥಾನ ನೀಡಿದರೆ ಪ್ರಯೋಜನವಾಗಲಾರದು ಎಂಬ ಅಭಿಪ್ರಾಯ ಮೂಡಿತ್ತು ಎಂದು ಈ ಮೂಲಗಳು ತಿಳಿಸುತ್ತವೆ.

ಬಾಗಲಕೋಟೆಯ 7 ಸ್ಥಾನಗಳಲ್ಲಿ ಕಾಂಗ್ರೆಸ್‌ ಕೇವಲ 2 ಸ್ಥಾನ ಗೆದ್ದುಕೊಂಡು 4 ಸ್ಥಾನ ಕಳೆದುಕೊಂಡಿದ್ದು ಎಸ್‌.ಆರ್‌. ಪಾಟೀಲ… ಅವರಿಗೆ ಸಚಿವ ಸ್ಥಾನ ಸಿಗದಂತೆ ಮಾಡಿದೆ. 2013ರಲ್ಲಿ ಗದಗದಲ್ಲಿ ಗೆದ್ದುಕೊಂಡಿದ್ದ ನಾಲ್ಕು ಸ್ಥಾನಗಳಲ್ಲಿ ಮೂರನ್ನು ಈ ಬಾರಿ ಕಾಂಗ್ರೆಸ್‌ ಕಳೆದುಕೊಂಡಿದೆ. ರಾಜ್ಯ ಕಾಂಗ್ರೆಸ್‌ನ ಮುಂಚೂಣಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿರುವ, ಮಾಜಿ ಸಚಿವ ಎಚ್‌.ಕೆ. ಪಾಟೀಲ… ಜಿಲ್ಲೆಯಲ್ಲಿ ತಿಣುಕಾಡಿ ಗೆದ್ದಿದ್ದರು. ಈಗ ಮತ್ತೆ ಎಚ್‌.ಕೆ. ಪಾಟೀಲ…ರಿಗೆ ಸಚಿವ ಸ್ಥಾನ ನೀಡಿದರೆ ಪಕ್ಷಕ್ಕೆ ದೊಡ್ಡಮಟ್ಟದ ಲಾಭವಾಗಲಾರದು ಎಂದು ಪಕ್ಷದ ವರಿಷ್ಠರಿಗೆ ಮನವರಿಕೆ ಆಯಿತು ಎನ್ನಲಾಗುತ್ತದೆ.

ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಗೆದ್ದರೂ ಕಾಂಗ್ರೆಸ್‌ನ ಪ್ರಬಲ ನಾಯಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ದಾವಣಗೆರೆ ಉತ್ತರದಿಂದ ಅವರ ಪುತ್ರ ಎಸ್‌.ಎಸ್‌. ಮಲ್ಲಿಕಾರ್ಜುನ ಸೋತಿರುವುದು ಒಂದೆಡೆಯಾದರೆ, ದಾವಣಗೆರೆ ಜಿಲ್ಲೆಯಲ್ಲಿರುವ ಒಟ್ಟು 8 ಕ್ಷೇತ್ರಗಳಲ್ಲಿ 2013ಕ್ಕೆ ಹೋಲಿಸಿದರೆ 5 ಕ್ಷೇತ್ರಗಳನ್ನು ಕಾಂಗ್ರೆಸ್‌ ಈ ಚುನಾವಣೆಯಲ್ಲಿ ಕಳೆದುಕೊಂಡಿದೆ. ಇದು ಶಾಮನೂರು ಅವರ ಪಾಲಿಗೆ ಹಿನ್ನಡೆಯಾಗಿ ಪರಿಣಮಿಸಿದೆ.

ಬೆಂಗಳೂರಿನ ರೋಷನ್‌ ಬೇಗ್‌ ಮತ್ತು ರಾಮಲಿಂಗಾರೆಡ್ಡಿ ಅವರು ಚುನಾವಣೆಯಲ್ಲಿ ಗೆದ್ದಿದ್ದರೂ ತಮ್ಮ ಸುತ್ತಮುತ್ತಲಿನ ಕ್ಷೇತ್ರಗಳ ಮೇಲೆ ಪ್ರಭಾವ ಬೀರಿ ಅಲ್ಲೂ ಕಾಂಗ್ರೆಸ್‌ ಗೆಲ್ಲುವಂತೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂಬುದು ಕಾಂಗ್ರೆಸ್‌ ವರಿಷ್ಠ ನಾಯಕರಿಗೆ ಅನಿಸಿದೆ. ಇನ್ನು ರಾಮಲಿಂಗಾರೆಡ್ಡಿ ಪುತ್ರಿಗೆ ಜಯನಗರದ ಟಿಕೆಚ್‌ ನೀಡಿರುವುದೂ ಅವರ ಮಂತ್ರಿಗಿರಿಗೆ ಅಡ್ಡಿಯಾಗಿದೆ.

ವಿಜಯಪುರದಲ್ಲಿನ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 5 ಸ್ಥಾನ ಕಳೆದುಕೊಂಡರೂ ಎಂ.ಬಿ. ಪಾಟೀಲ… ಅವರಿಗೆ ಸಚಿವ ಸ್ಥಾನ ತಪ್ಪಲು ಪ್ರಮುಖ ಕಾರಣ ಅವರಿಗೆ ಸಚಿವ ಸ್ಥಾನ ನೀಡಲೇಬಾರದು ಎಂದು ಕೆಲ ಲಿಂಗಾಯತ ಶಾಸಕರು ಹಿಡಿದಿರುವ ಪಟ್ಟು. ಎಂ.ಬಿ. ಪಾಟೀಲ… ವಿರುದ್ಧ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿದ್ದ ಈ ಲಿಂಗಾಯತ ಶಾಸಕರು ರಾಜೀನಾಮೆ ಕೊಡಲು ಕೂಡ ಹಿಂಜರಿಯಲಾರರು ಎಂದು ಕಾಂಗ್ರೆಸ್‌ ಹೈಕಮಾಂಡ್‌ಗೆ ಮನದಟ್ಟಾದ ಹಿನ್ನೆಲೆಯಲ್ಲಿ ಪಾಟೀಲ…ರನ್ನು ಸಚಿವ ಸ್ಥಾನಕ್ಕೆ ಪರಿಗಣಿಸದಿರಲು ತೀರ್ಮಾನಿಸಲಾಯಿತು ಎಂದು ಈ ಮೂಲಗಳು ಹೇಳುತ್ತವೆ.

ದೇಶಪಾಂಡೆ, ಡಿಕೆಶಿ,  ಖಾದರ್‌ಗೇಕೆ ವಿನಾಯ್ತಿ?

ರಾಮನಗರದ ನಾಲ್ಕು ಕ್ಷೇತ್ರಗಳಲ್ಲಿ ತಾವು ಮಾತ್ರ ಕನಕಪುರದಿಂದ ಗೆದ್ದರೂ ಡಿ.ಕೆ. ಶಿವಕುಮಾರ್‌, ಉತ್ತರ ಕನ್ನಡದ 6 ಕ್ಷೇತ್ರಗಳಲ್ಲಿ ಕೇವಲ 2 ಕ್ಷೇತ್ರಗಳನ್ನು ಮಾತ್ರ ಗೆದ್ದರೂ ಆರ್‌.ವಿ. ದೇಶಪಾಂಡೆ, ದಕ್ಷಿಣ ಕನ್ನಡದ 8 ಸ್ಥಾನಗಳಲ್ಲಿ ಏಳನ್ನು ಕಳೆದುಕೊಂಡರೂ ಯು.ಟಿ. ಖಾದರ್‌ ಹೇಗೆ ಮಂತ್ರಿಯಾಗಿದ್ದಾರೆæ, ಅವರಿಗೆ ಹೇಗೆ ವಿನಾಯ್ತಿ ಸಿಕ್ಕಿತು ಎಂದು ಕೇಳಿದರೆ ಇವರನ್ನು ಬೇರೆ ಬೇರೆ ಕಾರಣಗಳಿಂದ ಕೈ ಬಿಡಲು ಸಾಧ್ಯವೇ ಇರಲಿಲ್ಲ ಎನ್ನುತ್ತವೆ ಈ ಮೂಲಗಳು.

Follow Us:
Download App:
  • android
  • ios