ಬೆಂಗಳೂರು[ಆ.05]: ಜೆಡಿಎಸ್ ನ ನೂತನ ರಾಜ್ಯಾಧ್ಯಕ್ಷರಾಗಿ ಹಿರಿಯ ರಾಜಕಾರಣಿ, ಹುಣಸೂರು ಕ್ಷೇತ್ರದ ಶಾಸಕ ಹೆಚ್.ವಿಶ್ವನಾಥ್ ಅವರನ್ನು ನೇಮಿಸಲಾಗಿದೆ.

ಇಂದು ಬೆಂಗಳೂರಿನಲ್ಲಿ ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಕಾಂಗ್ರೆಸಿನಲ್ಲಿ ವಿಶ್ವನಾಥ್ ಶಾಸಕ, ಸಚಿವ, ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಮುನಿಸಿನಿಂದಾಗಿ ಕೆಲ ತಿಂಗಳ ಹಿಂದೆ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು.

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹುಣುಸೂರು ಕ್ಷೇತ್ರದಿಂದ ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಕುಮಾರಸ್ವಾಮಿ ಮಂತ್ರಿಮಂಡಲದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರೂ ಮೈತ್ರಿ ಸರ್ಕಾರವಾದ ಕಾರಣ ಮಂತ್ರಿ ಸ್ಥಾನ ಲಭಿಸಿರಲಿಲ್ಲ. ವಿಧಾನಸಭೆಯ ಉಪಸಭಾಪತಿಯನ್ನಾಗಿ ಮಾಡಲು ಜೆಡಿಎಸ್ ನಾಯಕರು ಚಿಂತಿಸಿದ್ದರು. ಆದರೆ ಇದಕ್ಕೆ ವಿಶ್ವನಾಥ್ ಒಪ್ಪಿರಲಿಲ್ಲ. 

ಹಾಲಿ ರಾಜ್ಯಾಧ್ಯಕ್ಷರಾಗಿರುವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವ ಕಾರಣ ಪಕ್ಷ ಸಂಘಟನೆಯೊಂದಿಗೆ ಎರಡೂ ಜವಾಬ್ದಾರಿ ನಿರ್ವಹಿಸಲು ಕಷ್ಟವಾಗುವುದರಿಂದ  ವಿಶ್ವನಾಥ್ ಅವರನ್ನು ಆಯ್ಕೆ ಮಾಡಲಾಗಿದೆ.