ರಾಹುಲ್ ಗಾಂಧಿ ಪ್ರಧಾನಿಗೆ ಒಪ್ಪದ ಮಮತಾ ಹಾಗೂ ಮಾಯಾವತಿ ಕರ್ನಾಟಕದಲ್ಲಿ ಬಿಜೆಪಿಯನ್ನು ಚೆಕ್‌ಮೇಟ್ ಮಾಡಿದ ರಾಹುಲ್‌ಗೀಗ ಹೊಸ ಚಿಂತೆ ಶುರು

2016ರಲ್ಲಿ ಮೋದಿಯನ್ನು ಎದುರಿಸಲು ತನ್ನಲ್ಲಿದ್ದ ಜಿಎಸ್‌ಟಿ, ಡಿಮಾನಿಟೈಸೇಶನ್, ಪೆಟ್ರೋಲ್ ಬೆಲೆ ಏರಿಕೆ ಹೀಗೆ ಎಲ್ಲ ಅಸ್ತ್ರಗಳನ್ನು ಬಳಸಿ ಈಗಲೇ ಬಳಲಿ ಬೆಂಡಾಗಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೊನೆಗೆ ಬತ್ತಳಿಕೆಯಿಂದ ತೆಗೆದದ್ದು ಮಹಾಗಟಬಂಧನ ಎಂಬ ಗಣಿತದ ಅಸ್ತ್ರ.

ಕರ್ನಾಟಕದಲ್ಲಿ ಇದು ಕ್ಲಿಕ್ ಆದ ನಂತರ ಮುಂದಿನ ಪ್ರಧಾನಮಂತ್ರಿ ನಾನೇ ಎಂಬ ಹುಮ್ಮಸ್ಸಿನಲ್ಲಿದ್ದ ಗಾಂಧಿ ಕುಡಿಗೆ ಮಮತಾ ಮತ್ತು ಮಾಯಾ ಇಬ್ಬರೂ ನೋ ಎಂದಿರುವುದು ಶಾಕ್ ನೀಡಿದೆ.

ಕಳೆದ ವಾರ ದೆಹಲಿಗೆ ಬಂದಿದ್ದ ಮಮತಾ ಬ್ಯಾನರ್ಜಿ ಯಾವುದೇ ಕಾರಣಕ್ಕೂ ರಾಹುಲ್ ನೇತೃತ್ವವನ್ನು ಒಪ್ಪಿಕೊಳ್ಳಲು ಆಗುವುದಿಲ್ಲ, ಇದು ಚುನಾವಣೆಯಲ್ಲಿ ತಿರುಗುಬಾಣವಾದೀತು. ಯಾರೂ ಕೂಡ ಪ್ರಧಾನ ಮಂತ್ರಿ ಎಂದು ಬಿಂಬಿತವಾಗೋದು ಬೇಡ, ಆಯಾ ರಾಜ್ಯಗಳಲ್ಲಿ ಬಿಜೆಪಿ ವಿರೋಧಿ ಮತಗಳು ಹರಿದು ಹಂಚಿ ಹೋಗದಂತೆ ತಡೆಯಲು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳೋಣ. ಫಲಿತಾಂಶ ಬಂದ ನಂತರ ಕುಳಿತುಕೊಂಡು ಪ್ರಧಾನ ಮಂತ್ರಿ ಆಯ್ಕೆ ಮಾಡಿಕೊಳ್ಳೋಣ ಎಂದು ಕಾಂಗ್ರೆಸ್ ನಾಯಕರ ಎದುರು ಸ್ಪಷ್ಟವಾಗಿಯೇ ಹೇಳಿದ್ದಾರೆ.

ಇನ್ನು ಮಾಯಾವತಿ ಕೂಡ ರಾಹುಲ್‌ರನ್ನು ಚುನಾವಣೆಗೆ ಮುಂಚೆ ಪ್ರಧಾನಿಯಾಗಿ ಬಿಂಬಿಸಲು ಒಲ್ಲೆ ಎಂದಿದ್ದಾರೆ. ಅಷ್ಟೇ ಅಲ್ಲ, ಉತ್ತರ ಪ್ರದೇಶದಲ್ಲಿ ತನ್ನ ಕೋಟಾದಿಂದ ಕಾಂಗ್ರೆಸ್‌ಗೆ ಸೀಟು ಬಿಟ್ಟುಕೊಡಲು ಆಗೋದಿಲ್ಲ. ಬೇಕಿದ್ದಲ್ಲಿ ಸಮಾಜವಾದಿ ಪಕ್ಷದಿಂದ ತೆಗೆದುಕೊಳ್ಳಿ ಎಂದಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಚೆಕ್‌ಮೇಟ್ ಮಾಡಿದ ರಾಹುಲ್‌ಗೀಗ ಹೊಸ ಚಿಂತೆ ಶುರುವಾಗಿದೆ.

(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)