ಸಿಎಂ ಸ್ಥಾನ: ಹಿರಿಯ ಕಾಂಗ್ರೆಸಿಗನಿಗೆ 2008ರ ಕಾಯಂ ದುಃಖ

Selected Part of Prashant Natu India Gate Column july 10 Part 3
Highlights

  • 2004ರಲ್ಲಿ ನೀವು ನಮ್ಮನ್ನು ಭಾಳಾನೇ ಟೀಕಿಸುತ್ತೀರಿ. ಧರ್ಮಸಿಂಗ್ ಹಾಗಲ್ಲ, ತುಂಬಾ ಫ್ಲೆಕ್ಸಿಬಲ್ ಇದ್ದಾರೆ ಎಂದಿದ್ದರು ಗೌಡರು
  • 2008ರಲ್ಲೂ ತಪ್ಪಿ ಹೋಗಿದ್ದ ಸಿಎಂ ಹುದ್ದೆ

ಸಿದ್ದರಾಮಯ್ಯ, ಕುಮಾರಸ್ವಾಮಿ, ಯಡಿಯೂರಪ್ಪ ಈ ಮೂವರ ನಡುವೆ ಹತ್ತು ವರ್ಷಗಳಿಂದ ನಡೆದ ಜಂಗಿ ಕುಸ್ತಿಯಲ್ಲಿ ಅಪ್ಪಿತಪ್ಪಿ ತನಗೇನಾದರೂ ಸಿಎಂ ಹುದ್ದೆ ಸಿಗುತ್ತದೆಯೇ ಎಂದು ಕಾಯುತ್ತಲೇ ಬಂದವರು ಖರ್ಗೆ ಸಾಹೇಬರು.

2004ರಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿ ಆದಾಗ ಎಲ್ಲ ನಾಯಕರು ದೆಹಲಿಯಲ್ಲಿ ಇದ್ದರಂತೆ. ಆಗ ಎಸ್ಸೆಂ ಕೃಷ್ಣರನ್ನು ವನವಾಸಕ್ಕೆ ಕಳಿಸಲು ಯಾರನ್ನು ಮುಖ್ಯಮಂತ್ರಿ ಮಾಡುವುದೆಂದು ದೇವೇಗೌಡರು ಹುಡುಕಾಟದಲ್ಲಿದ್ದಾಗ, ಗೌಡರ ಹುಟ್ಟುಹಬ್ಬದ ದಿನ ಖರ್ಗೆ ರಾತ್ರಿ ದೇವೇಗೌಡರ ನಿವಾಸಕ್ಕೆ ಹೋದರಂತೆ. ಶುಭಾಶಯ ಕೋರಿ ಸ್ವೀಟ್ ಸೇವಿಸಿದ ನಂತರ ವಿಷಯ ಪ್ರಸ್ತಾಪಿಸಿದ ಖರ್ಗೆ, ‘ಈಗ ನಾನೇ ಸೀನಿಯರ್ ಅದೇನಿ.’ ಎಂದರಂತೆ.

ಅದಕ್ಕೆ ಗೌಡರು, ‘ನಿಮ್ಮ ಮಿತ್ರ ಧರ್ಮಸಿಂಗ್ ಹೆಸರು ಫೈನಲ್ ಆಗಿದೆ. ನೀವು ನಮ್ಮನ್ನು ಭಾಳಾನೇ ಟೀಕಿಸುತ್ತೀರಿ. ಧರ್ಮಸಿಂಗ್ ಹಾಗಲ್ಲ, ತುಂಬಾ ಫ್ಲೆಕ್ಸಿಬಲ್ ಇದ್ದಾರೆ, ನೀವು ಮೇಡಂಗೆ ಅವರ ಹೆಸರು ಹೇಳಿ’ ಎಂದರಂತೆ.ಸಂಗ್ಯಾ ಬಾಳ್ಯಾ ತರಹ ಇದ್ದ ಖರ್ಗೆ-ಧರ್ಮಸಿಂಗ್ ನಡುವೆ ಸ್ವಲ್ಪ ಮನಸ್ತಾಪ ಆರಂಭ ಆಗಿದ್ದು ಆವತ್ತಿನಿಂದಲೇ.

ಆದರೆ 2008ರಲ್ಲಿ ಯಡಿಯೂರಪ್ಪ ಅವರು ವಚನಭ್ರಷ್ಟತೆಯ ಆರೋಪ ಮಾಡಿ ಚುನಾವಣೆಗೆ ಹೋದಾಗ ಖರ್ಗೆ ಅವರಿಗೆ ಫೋನ್ ಮಾಡಿದ ದೇವೇಗೌಡರು ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಳ್ಳೋಣ ಎಂದು ಪ್ರಸ್ತಾಪ ಮಾಡಿದ್ದರಂತೆ. ಆಗ ಕೃಷ್ಣ, ಡಿ ಕೆ ಶಿವಕುಮಾರ್ ಮಾತು ಕೇಳಿದ ಸೋನಿಯಾ ಮಾತ್ರ ಇದಕ್ಕೆ ಒಪ್ಪಲಿಲ್ಲವಂತೆ.

ವರ್ತಮಾನದಲ್ಲೂ ಕಾಡ್ತದ ನೋವು ಮೊನ್ನೆಯ ಚುನಾವಣೆ ನಡೆಯುವವರೆಗೂ ಖರ್ಗೆ ಎದುರು ಯಾರಾದರೂ, ‘2008ರಲ್ಲಿ ನೀವು ಮುಖ್ಯಮಂತ್ರಿ ಆಗಿಬಿಡಬೇಕಿತ್ತು ಬಿಡ್ರಿ’ ಎಂದರೆ ಸಾಕು ನೋವಿನಿಂದ ಮಾತನಾಡುತ್ತಿದ್ದ ಖರ್ಗೆ ಸಾಹೇಬರು, ಆಪ್ತ ಕಾರ್ಯದರ್ಶಿ ಶಿವಣ್ಣಗೆ ಹೇಳಿ 2008ರ ಚುನಾವಣೆಯ ಫೈಲ್ ತರಿಸುತ್ತಿದ್ದರು. ಬಿಜೆಪಿಗಿಂತ ನಾವು ಮುಂದಿದ್ದೆವು, ಆದರೆ ನಮ್ಮ 32 ಮಂತ್ರಿಗಳು ಸೋತು ಅಧಿಕಾರ ದೂರವಾಯಿತು ಎಂದು ವಿವರಿಸುತ್ತಿದ್ದರು.

2013ರಲ್ಲಿ ಆ ಮಾಜಿ ಮಂತ್ರಿಗಳು ಗೆದ್ದರು, ಹಾಗಾಗಿ ಅಧಿಕಾರ ಸಿಕ್ಕಿತು, ಅದಕ್ಕೆ ಕಾರಣ ಸಿದ್ದರಾಮಯ್ಯ ಅಲ್ಲ ಎಂದು ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದರು. ಖರ್ಗೆ ತೀರಾ ಆಪ್ತರ ಮುಂದೆ ಹೇಳಿಕೊಂಡಿರುವ ಪ್ರಕಾರ, ಮೇ 15ರಂದು ದಿಲ್ಲಿ ನಾಯಕರು ಮನಸ್ಸು ಮಾಡಿ ದೇವೇಗೌಡರ ಜೊತೆಗಿನ ಮಾತುಕತೆ ವೇಳೆ ದಲಿತ ಮುಖ್ಯಮಂತ್ರಿ ಎನ್ನುವ ಕಾರ್ಡ್ ತೇಲಿಬಿಟ್ಟಿದ್ದರೆ ದೇವೇಗೌಡರಿಗೆ ವಿರೋಧಿಸುವುದು ಕಷ್ಟವಾಗುತ್ತಿತ್ತಂತೆ.

ತಮ್ಮನ್ನು ತಪ್ಪಿಸಲೆಂದೇ ಕೆಲವರು ತರಾತುರಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಎಂಬ ಆಫರ್ ನೀಡಿಬಿಟ್ಟರು ಎಂಬ ನೋವು ಖರ್ಗೆಗಿದೆ. ಕೈಗೆ ಬಂದ ತುತ್ತುಗಳು ಪದೇ ಪದೇ ಬಾಯಿಗೆ ಬಾರದಿದ್ದಾಗ ನೋವಾಗುವುದು ಸಹಜ.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]  

loader