ಕರಾವಳಿಗೆ ಪಾಕಿಸ್ತಾನದಿಂದ ಭಯೋತ್ಪಾದಕರ ಲಗ್ಗೆ?| ಕಛ್‌ ಮೂಲಕ ಕಮಾಂಡೋಗಳ ಪ್ರವೇಶ ಸಾಧ್ಯತೆ: ಗುಪ್ತಚರ ದಳ ಎಚ್ಚರಿಕೆ| ಗುಜರಾತ್‌ನ ಎಲ್ಲ ಬಂದರುಗಳಲ್ಲಿ ಅತ್ಯಂತ ಬಿಗಿಭದ್ರತೆ, ತೀವ್ರ ಕಟ್ಟೆಚ್ಚರ

ನವದೆಹಲಿ[ಆ.30]: ಪಾಕಿಸ್ತಾನ ಪ್ರಾಯೋಜಿತ ಉಗ್ರರು ಭಾರತದ ಮೇಲೆ ಸಮುದ್ರದ ಮೂಲಕ ದಾಳಿ (ಸಮುಂದರಿ ಜಿಹಾದ್‌) ನಡೆಸಬಹುದು ಎಂದು ಭಾರತೀಯ ನೌಕಾಪಡೆ ಎಚ್ಚರಿಕೆ ಸಾರಿದ ಬೆನ್ನಲ್ಲೇ, ಪಾಕಿಸ್ತಾನದಿಂದ ನುರಿತ ತರಬೇತಿ ಪಡೆದ ಕಮಾಂಡೋಗಳು ಗುಜರಾತ್‌ನ ಕಛ್‌ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿ ದಾಳಿ ಎಸಗುವ ಸಾಧ್ಯತೆಯಿದೆ ಎಂದು ಗುಪ್ತಚರ ಸಂಸ್ಥೆ ಕಟ್ಟೆಚ್ಚರ ಸಾರಿದೆ.

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದಾಗಿರುವ ಹಿನ್ನೆಲೆಯಲ್ಲಿ ಒಂದೆಡೆ ಬಹಿರಂಗವಾಗಿ ಯುದ್ಧದ ಮಾತುಗಳನ್ನು ಆಡುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ಉಗ್ರರನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಪ್ರಯತ್ನ ನಡೆಸುತ್ತಿರುವುದು ಇದರಿಂದ ಸ್ಪಷ್ಟವಾಗಿದೆ.

ಉಗ್ರರು ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ಗುಜರಾತ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸಬಹುದು ಅಥವಾ ಕೋಮು ಸೌಹಾರ್ದತೆಯನ್ನು ಹಾಳು ಮಾಡಬಹುದು ಎಂಬ ಆತಂಕ ವ್ಯಕ್ತವಾಗಿದ್ದು, ಈ ಕಾರಣಕ್ಕಾಗಿ ಗುಜರಾತ್‌ನ ಎಲ್ಲಾ ಬಂದರು ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ. ವಿಶೇಷವಾಗಿ ಕಛ್‌ ಜಿಲ್ಲೆಯ ಕಾಂಡ್ಲಾ ಮತ್ತು ಮುಂದ್ರಾ ಬಂದರು ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದ್ದು, ಶಂಕಿತರಂತೆ ಕಂಡುಬರುವ ವ್ಯಕ್ತಿಗಳು, ಹಡಗುಗಳು, ಸುತ್ತಮುತ್ತ ಸಂಚರಿಸುವ ಎಲ್ಲ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲನೆಗೊಳಪಡಿಸಬೇಕು ಎಂದು ದೀನದಯಾಳ್‌ ಬಂದರು ಟ್ರಸ್ಟ್‌ನ ಸೂಪರಿಂಟೆಂಡ್‌ ಅವರು ಸೂಚನೆ ನೀಡಿದ್ದಾರೆ.

ಏತನ್ಮಧ್ಯೆ, ಪಾಕ್‌ನಿಂದ ತರಬೇತಿ ಪಡೆದಿರುವ ಉಗ್ರರು ಹರಾಮಿ ನಾಲಾ ಕ್ರೀಕ್‌ ಪ್ರದೇಶದಿಂದ ಗಲ್‌್ಫ ಆಫ್‌ ಕಛ್‌ ಅನ್ನು ಈಗಾಗಲೇ ಪ್ರವೇಶಿಸಿದ್ದಾರೆ. ಅವರು ಸಮುದ್ರ ಮೂಲಕ ದಾಳಿ ಎಸಗುವ ತರಬೇತಿಯನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಅದಾನಿ ಬಂದರು ಹಾಗೂ ವಿಶೇಷ ಆರ್ಥಿಕ ವಲಯ ಹೇಳಿಕೆ ಬಿಡುಗಡೆ ಮಾಡಿವೆ.

ಕಛ್‌ ಮೇಲೇಕೆ ಉಗ್ರರ ಕಣ್ಣು?

ಗುಜರಾತ್‌ ಮೂಲದ ಅದಾನಿ ಗ್ರೂಪ್‌ ಕಂಪನಿ ದೇಶದ ಅತಿದೊಡ್ಡ ಬಂದರು ಪ್ರದೇಶಗಳಲ್ಲಿ ಒಂದಾಗಿರುವ ಮುಂದ್ರಾ ಬಂದರು ಪ್ರದೇಶವನ್ನು ನಿರ್ವಹಿಸುತ್ತಿದೆ. ಅಲ್ಲದೆ, ಕಳೆದ ವರ್ಷದ ರಾರ‍ಯಂಕಿಂಗ್‌ನಲ್ಲಿ ಮುಂದ್ರಾ ಬಂದರು ಪ್ರದೇಶವು ವಹಿವಾಟಿನಲ್ಲಿ ಅಗ್ರ ಸ್ಥಾನ ಪಡೆದಿತ್ತು. ಇನ್ನು ಕಾಂಡ್ಲಾ ಬಂದರು ಪ್ರದೇಶ ಸರ್ಕಾರದ ಸುಪರ್ದಿಯಲ್ಲಿದ್ದು, ಭಾರೀ ಪ್ರಮಾಣದ ರಫ್ತು ಮತ್ತು ಆಮದು ಪ್ರಕ್ರಿಯೆ ವ್ಯವಹಾರಗಳು ಈ ಬಂದರು ಮೂಲಕ ನಡೆಯುತ್ತವೆ.

ಜೊತೆಗೆ, ರಿಲಯನ್ಸ್‌ ಇಂಡಸ್ಟ್ರೀಸ್‌ ಒಡೆತನದ ಜಾಮ್‌ನಗರದಲ್ಲಿರುವ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣ ಘಟಕ, ವಾದಿನರ್‌ನಲ್ಲಿರುವ ರಷ್ಯಾದ ತೈಲ ಸಂಸ್ಕರಣ ಘಟಕ ಸೇರಿದಂತೆ ಇನ್ನಿತರ ಪ್ರಮುಖ ಕೈಗಾರಿಕೆಗೆ ಸಂಬಂಧಿಸಿದ ಕಂಪನಿಗಳು ನೆಲೆಯೂರಿವೆ. ಅಲ್ಲದೆ, ಅರಬ್ಬಿ ಸಮುದ್ರದ ಕಛ್‌ ಭಾಗದಲ್ಲಿರುವ ಈ ಎರಡೂ ಬಂದರು ಪ್ರದೇಶಗಳು ಪಾಕಿಸ್ತಾನದ ಹತ್ತಿರವೇ ಇರುವುದರಿಂದ, ಉಗ್ರಗಾಮಿಗಳು ಹಾಗೂ ಶತ್ರು ರಾಷ್ಟ್ರದ ದಾಳಿಯ ಪ್ರಮುಖ ಟಾರ್ಗೆಟ್‌ ಆಗಿ ಪರಿಣಮಿಸಿದೆ.