ರಾಮನಗರ: ನನ್ನ ಜೀವನದ ಅಂತ್ಯದಲ್ಲಿ ನೆಮ್ಮದಿಯಿಂದ ಪ್ರಾಣ ಬಿಡಬೇಕೆಂಬುದು ಕೊನೆಯ ಆಸೆ. ಅಷ್ಟರೊಳಗೆ ಜಾತ್ಯತೀತ ಶಕ್ತಿಗಳು ಒಗ್ಗೂಡಿ ಬಿಜೆಪಿ ಬೆಳೆಯಲು ಅವಕಾಶ ನೀಡಬಾರದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.

ರಾಮನಗರದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಪರ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅವರು, ಬಿಜೆಪಿಯನ್ನು ನಿರ್ಮೂಲನೆ ಮಾಡುವ ಸಲುವಾಗಿಯೇ ಜೆಡಿಎಸ್, ಕಾಂಗ್ರೆಸ್ ಸೇರಿದಂತೆ ಜಾತ್ಯತೀತ ತತ್ವದಲ್ಲಿ ಬದ್ಧತೆವುಳ್ಳ ಪ್ರಾದೇಶಿಕ ಪಕ್ಷಗಳು ಒಗ್ಗೂಡುತ್ತಿವೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರದೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಯಿತು. ಕಾಂಗ್ರೆಸ್‌ನ ದೆಹಲಿ ನಾಯಕರು ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡುತ್ತೇವೆ, ಮುಂದಿನ ರಾಜಕಾರಣಕ್ಕೆ ಕರ್ನಾಟಕದಿಂದಲೇ ಬದಲಾವಣೆ ಆರಂಭವಾಗಬೇಕೆಂದು ಹಠ ಹಿಡಿದರು ಎಂದು ತಿಳಿಸಿದರು. 

ಕಾಂಗ್ರೆಸ್ ಸೇರಿ 13 ರಾಜಕೀಯ ಪಕ್ಷಗಳು ಬೆಂಬಲ ನೀಡಿದ್ದರಿಂದಲೇ ನಾನು ಪ್ರಧಾನ ಮಂತ್ರಿಯಾಗಿದ್ದೆ. ಇದರಲ್ಲಿ ದೈವದ ಲೀಲೆಯೂ ಇದೆ. ಈಗ ಅದೇ ಪಕ್ಷದ ಮುಖಂಡರು ಪ್ರಬಲವಾಗಿ ಬೆಳೆದಿದ್ದಾರೆ. ಕಾಂಗ್ರೆಸ್‌ಗೆ ರಾಹುಲ್ ಗಾಂಧಿ ನಾಯಕತ್ವ ದೊರೆತಿದೆ ಎಂದರು.