Asianet Suvarna News Asianet Suvarna News

ಬರ್ಮುಡಾ ಟ್ರಯಾಂಗಲ್ ರಹಸ್ಯವೇನು?

ನೂರಾರು ವರ್ಷಗಳಿಂದ ನಿಗೂಢವಾಗಿಯೇ ಉಳಿದಿರುವ ಭಯಾನಕ ಬರ್ಮುಡಾ ಟ್ರಯಾಂಗಲ್ ರಹಸ್ಯ ಕೊನೆಗೂ ಬಯಲಾದಂತೆ ಭಾಸವಾಗುತ್ತಿದೆ. ಬರ್ಮುಡಾ ಟ್ರಯಾಂಗಲ್ ಭಾಗದಲ್ಲಿ ಏಳುತ್ತಿದ್ದ ಸುಮಾರು ೧೦೦ ಅಡಿ ಎತ್ತರದ ರಕ್ಕಸ ಅಲೆಗಳೇ ಇದುವರೆಗಿನ ನಿಗೂಢ ದುರಂತಗಳಿಗೆ ಕಾರಣ ಎಂದು ‘ಚಾನೆಲ್ 5’ ‘ಬರ್ಮುಡಾ ಟ್ರಯಾಂಗಲ್ ಎನಿಗ್ಮಾ’ ಸಾಕ್ಷ್ಯಚಿತ್ರವನ್ನು ಬಿಡುಗಡೆ ಮಾಡಿದೆ. ಇಷ್ಟಕ್ಕೂ ಏನಿದು ಬರ್ಮುಡಾ ಟ್ರಯಾಂಗಲ್? ಎಲ್ಲಿದೆ? ನಿಜಕ್ಕೂ ಅಲ್ಲಿ ಏನಾಗ್ತಿದೆ? ಇದುವರೆಗಿನ ನಿಗೂಢ ದುರಂತಗಳೆಷ್ಟು? ನಿಜಕ್ಕೂ ಶತಮಾನದ ನಿಗೂಢ ರಹಸ್ಯ ಬಗೆಹರೀತಾ? ಈ ಕುರಿತ ಸಮಗ್ರ ಮಾಹಿತಿ ಇಲ್ಲಿದೆ. 

Secret of The Bermuda Triangle
Author
Bengaluru, First Published Aug 4, 2018, 4:20 PM IST
  • Facebook
  • Twitter
  • Whatsapp

ಇಡೀ ವಿಶ್ವಕ್ಕೇ ನಿಗೂಢ ರಹಸ್ಯವಾಗಿ ಉಳಿದಿರುವ ಈ ಬರ್ಮುಡಾ ಟ್ರಯಾಂಗಲ್ ಕುರಿತಂತೆ ಮೊದಲ ಬಾರಿಗೆ ಮಾಹಿತಿ ನೀಡಿದ್ದು ಕ್ರಿಸ್ಟೋಫರ್ ಕೊಲಂಬಸ್. ತಾನು ಈ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ತನ್ನ ಹಡಗಿನ ದಿಕ್ಸೂಚಿ ನಿಂತೇ ಬಿಟ್ಟಿತ್ತು ಹಾಗೂ ಆಕಾಶದಲ್ಲಿ ಬೆಂಕಿಯ ಉಂಡೆಯೊಂದು ಭಾರೀ ವೇಗದಲ್ಲಿ ಸಾಗುತ್ತಿತ್ತು ಎಂದು ತನ್ನ ದಿನಚರಿಯಲ್ಲಿ ಬರೆದಿದ್ದಾರೆ.

ಬರ್ಮುಡಾ ಟ್ರಯಾಂಗಲ್ ಎಲ್ಲಿದೆ?
ಉತ್ತರ ಅಟ್ಲಾಂಟಿಕ್ ಸಮುದ್ರದ ತ್ರಿಕೋನಾಕಾರದ ಪ್ರದೇಶವೇ ಬರ್ಮುಡಾ ಟ್ರಯಾಂಗಲ್. ಅಂದರೆ ಅಟ್ಲಾಂಟಿಕ್ ಮಹಾಸಾಗರದ ನಕ್ಷೆಯನ್ನು ಹರಡಿ ಫ್ಲೋರಿಡಾದಿಂದ ಬರ್ಮುಡಾ ದ್ವೀಪಗಳು, ಅಲ್ಲಿಂದ ಪೋರ್ಟೋ ರೀಕೋ ಮತ್ತು ಅಲ್ಲಿಂದ ತಿರುಗಿ ಫ್ಲೋರಿಡಾ ಪ್ರದೇಶವನ್ನು ಮೂರು ಸರಳ ರೇಖೆಗಳಿಂದ ಕೂಡಿಸಿದರೆ ಮೂಡುವ ತ್ರಿಕೋನಾಕೃತಿಯ ನಡುವಣ ಭಾಗವೇ ಈ ಬರ್ಮುಡಾ ಟ್ರಯಾಂಗಲ್.

ಇದು ಜಗತ್ತಿನ ಅತಿ ಹೆಚ್ಚು ಹಡುಗುಗಳ ಪ್ರಯಾಣ ಮಾರ್ಗ. ಅಮೆರಿಕ, ಯೂರೋಪ್, ಕೆರಿಬಿಯನ್ ತಲುಪಲು ಹಡಗುಗಳು ಈ ಮಾರ್ಗ ಮೂಲಕವೇ ಹಾದು ಹೋಗುತ್ತವೆ. ಬರ್ಮುಡಾ ಟ್ರಯಾಂಗಲ್ ಸುಮಾರು ೪,೪೦,೦೦೦ ಚದರ ಮೈಲಿ ವಿಶಾಲ ಸಾಗರವನ್ನು ಒಳಗೊಂಡಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ನಮ್ಮ ದೇಶದ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳನ್ನು ಒಟ್ಟುಗೂಡಿಸಿದರೆ ಉಂಟಾಗುವ ಪ್ರದೇಶವನ್ನು ಇದು
ಒಳಗೊಂಡಿದೆ.

ನಿಗೂಢ ರಹಸ್ಯಕ್ಕೆ  ಬಲಿಯಾದವರೆಷ್ಟು?
ಬರ್ಮುಡಾ ಟ್ರಯಾಂಗಲ್ ಅಥವಾ ಡೆವಿಲ್ಸ್ ಟ್ರಯಾಂಗಲ್‌ನಲ್ಲಿ ಶತಮಾನದಿಂದಲೂ ನಿಗೂಢವಾಗಿ ನೂರಾರು ಹಡಗುಗಳು, ವಿಮಾನಗಳು ಕಣ್ಮರೆಯಾಗಿವೆ. 100 ವರ್ಷ ಅಂತರದಲ್ಲಿ ಈ ಪ್ರದೇಶದಲ್ಲಿ ಸುಮಾರು ಸಾವಿರಕ್ಕೂ ಅಧಿಕ ಜೀವಗಳು ಬಲಿಯಾಗಿವೆ. ಈ ನಿಗೂಢ ಪ್ರದೇಶದಲ್ಲಿ ವಾರ್ಷಿಕ ಸರಾಸರಿ 4 ವಿಮಾನಗಳು ಮತ್ತು 20 ಹಡಗುಗಳು ದುರಂತಕ್ಕೀಡಾಗಿವೆ ಎಂದು ಅಂಕಿ-ಅಂಶಗಳಿವೆ.

ನಿಜಕ್ಕೂ ಅಲ್ಲಿ ಏನಾಗ್ತಿದೆ?
ಇಲ್ಲಿ ಹಾರಾಟ ಮಾಡಿದ ಹಲವು ವಿಮಾನಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿವೆ. ಈ ಮಾರ್ಗದಲ್ಲಿ ಸಂಚರಿಸಿದ ಅದೆಷ್ಟೋ ಹಡಗುಗಳು ಅಪಘಾತಕ್ಕೀಡಾಗಿವೆ. ಅವುಗಳ ಅವಶೇಷಗಳೂ ಕೂಡ ಸಿಗದಂತೆ ನಿಗೂಢವಾಗಿ ಕಣ್ಮರೆಯಾಗಿವೆ. ಇದಕ್ಕೆ ಕಾರಣಗಳನ್ನು ಹುಡುಕ ಹೊರಟವರಿಗೆ ವೈಜ್ಞಾನಿಕ ಸತ್ಯಕ್ಕಿಂತ ಕಟ್ಟುಕಥೆಗಳ ಕಂತೆಯೇ ಪುಂಖಾನುಪುಂಖವಾಗಿ ದೊರಕಿದೆ. ಅಲ್ಲಿ ಅತಿಮಾನುಷ ಶಕ್ತಿಗಳಿವೆ ಎನ್ನುವುದು ಕೆಲವರ ವಾದ ವಾದರೆ, ಉಷ್ಣವಲಯದ ಚಂಡಮಾರುತ, ಎಲೆಕ್ಟ್ರಾನಿಕ್ ಫಾಗ್, ಮೀಥೇನ್ ಹೈಡ್ರೇಟ್ಸ್ ಮುಂತಾದ ಕಾರಣ ಗಳಿರಬಹುದೆಂಬುದು ವಿಜ್ಞಾನಿಗಳ ಅಭಿಮತ. ಆದರೆ ವಾಸ್ತವಿಕ ಕಾರಣ ಇದುವರೆಗೂ ನಿಗೂಢವಾಗಿಯೇ ಇದೆ.

ರಕ್ಕಸ ಅಲೆಗಳಿಗೆ ಕಾರಣವೇನು?
ಸುಮಾರು 100 ಅಡಿ ಎತ್ತರದ ರಕ್ಕಸ ಅಲೆಗಳು ಬರ್ಮುಡಾ ಟ್ರಯಾಂಗಲ್ ಭಾಗದಲ್ಲಿ ಏಳುತ್ತಿದ್ದು, ಅವು ಹಡಗು ಗಳನ್ನು ಆಪೋಶನ ತೆಗೆದುಕೊಂಡು ಇನ್ನಿಲ್ಲದಂತೆ ನಾಪತ್ತೆ ಮಾಡುತ್ತವೆ. ಇದೇ ವೇಳೆ ಇದ್ದಕ್ಕಿದ್ದಂತೆ ಈ ಭಾಗದಲ್ಲಿ ಏಳುವ
ಚಂಡಮಾರುತ ಹಾಗೂ ಅನಿಲ ಪ್ರಭಾವವು ಇಷ್ಟೊಂದು ರಕ್ಕಸ ಅಲೆಗಳ ಸೃಷ್ಟಿಗೆ ಕಾರಣವಾಗುತ್ತಿದೆ.

ಇದೇ ಚಂಡಮಾರುತ ಹಾಗೂ ಅಲೆಗಳ ಸೆಳೆತಗಳು ವಿಮಾನಗಳ ಪತನಕ್ಕೂ ನಾಂದಿ ಹಾಡಿರಬಹುದು. ಈ ರಕ್ಕಸ ಅಲೆಗಳಿಗೆ ಸಿಲುಕುವ ಹಡಗುಗಳು, ಅಲೆಗಳ ಹೊಡೆತ ತಾಳಲಾರದೆ ಮುಳುಗಿ ಹೋಗುವ ಜತೆಗೆ, ಅಪಘಾತವಾದ ಸಮುದ್ರದಿಂದ ಬಹುದೂರಕ್ಕೆ ಸಾಗುತ್ತವೆ. ಹೀಗಾಗಿಯೇ ಹಡಗುಗಳು, ವಿಮಾನಗಳ ಅವಶೇಷಗಳು ಸಿಗುತ್ತಿಲ್ಲ ಎಂದು ಸಾಕ್ಷ್ಯಚಿತ್ರದಲ್ಲಿ ಸೌತ್‌ಹ್ಯಾಂಪ್ಟನ್ ಮೂಲದ ತಜ್ಞರು ವಿಶ್ಲೇಷಿಸಿದ್ದಾರೆ.

ಪತ್ತೆಗೆ ತೆರಳಿದವರು ಮರಳಲೇ ಇಲ್ಲ!
ಜಗತ್ತಿನಾದ್ಯಂತ ಈ ‘ಡೆವಿಲ್ ಸೀ’ ಬಗ್ಗೆ ರೋಚಕ ಕಥೆಗಳು ಚಾಲ್ತಿಯಲ್ಲಿವೆ. 1952 ರಲ್ಲಿ ಜಪಾನ್ ಸರ್ಕಾರ ಈ ರಹಸ್ಯ ಭೇದಿಸಲು ತನಿಖಾ ತಂಡವೊಂದನ್ನು ಹಡಗಿನಲ್ಲಿ ಬರ್ಮುಡಾ ಟ್ರಯಾಂಗಲ್‌ಗೆ ಕಳುಹಿಸಿತು. ದುರಂತವೆಂದರೆ ೩೧ ಜನರಿದ್ದ ಆ ತಂಡ ಹಡಗಿನೊಂದಿಗೆ ಮತ್ತೆಂದೂ ಕಾಣಿಸಲೇ ಇಲ್ಲ. ಇದಾದ ಬಳಿಕವೂ ಅನೇಕರು ನಿಗೂಢ ತಿಳಿಯಲು ಅವಿರತ ಪ್ರಯತ್ನ ನಡೆಸಿದ್ದು, ಹಲವರು ಮರಳಿ ಬಂದಿಲ್ಲ.

ನಿಗೂಢ ರಹಸ್ಯ ನಿಜಕ್ಕೂ ಬಗೆಹರೀತಾ?
ಬರ್ಮುಡಾ ಟ್ರಯಾಂಗಲ್ ಮೇಲೆ ವಿಮಾನಗಳು ಅಥವಾ ಹಡಗುಗಳು ಸಾಗುವಾಗ ಏಕೆ ಏಕಾಏಕಿ ಅಪಘಾತಕ್ಕೀಡಾಗಿ ಅಸದೃಶವಾಗುತ್ತವೆ? ಎಂದು ಈವರೆಗೆ ಅನೇಕ ವಿಜ್ಞಾನಿಗಳು ಹಾಗೂ ಪತ್ರಕರ್ತರು ಶೋಧಿಸಲು ಯತ್ನಿಸಿದ್ದರು. ಆದರೆ ಕರಾರುವಾಕ್ಕಾದ ಕಾರಣಗಳನ್ನು ತಿಳಿಸುವಲ್ಲಿ ವಿಫಲರಾಗಿದ್ದರು. ಇದೀಗ ಚಾನೆಲ್-5 ನಿಗೂಢತೆಗೆ ರಕ್ಕಸ ಅಲೆಗಳೇ ಕಾರಣ ಎಂದು ಹೇಳಿದೆಯಾ ದರೂ, ಈ ಸಂಶೋಧನೆಯು ಊಹೆಯನ್ನು ಆಧರಿಸಿದೆ. ಹೀಗಾಗಿ ಈಗಲೂ ಬರ್ಮುಡಾ ಟ್ರಯಾಂಗಲ್ ನಿಗೂಢವಾಗೇ ಉಳಿದಿದೆ ಎನ್ನಲು ಅಡ್ಡಿಯಿಲ್ಲ

Follow Us:
Download App:
  • android
  • ios