ರಾಜ್ಯಾದ್ಯಂತ 37 ಕಾಲೇಜುಗಳು 100% ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿವೆ. ಪೂರ್ಣ ಫಲಿತಾಂಶ ಪಡೆದ ಕಾಲೇಜುಗಳಲ್ಲಿ ಸರಕಾರೀ ಕಾಲೇಜುಗಳ ಸಂಖ್ಯೆ ಮೂರು. ಕಳೆದ ವರ್ಷದಂದು 41 ಕಾಲೇಜುಗಳು ಪೂರ್ಣ ಫಲಿತಾಂಶ ಪಡೆದಿದ್ದವು.

ಬೆಂಗಳೂರು(ಮೇ 11): ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಶೇ.52.38 ಅಭ್ಯರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಬಾರಿಗಿಂತ ಹೆಚ್ಚೂಕಡಿಮೆ ಶೇ.5ರಷ್ಟು ಕಡಿಮೆ ಫಲಿತಾಂಶ ಬಂದಿದೆ. 2015-16 ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಶೇ.57.20 ಫಲಿತಾಂಶ ಬಂದಿತ್ತು.

ಈ ವರ್ಷ ಪರೀಕ್ಷೆ ಬರೆದ 6,79,061 ವಿದ್ಯಾರ್ಥಿಗಳ ಪೈಕಿ 3,55,697 ಮಂದಿ ಪಾಸಾಗಿದ್ದಾರೆ. ಉಡುಪಿ ಜಿಲ್ಲೆ ಈ ಬಾರಿಯೂ ಮೊದಲ ಸ್ಥಾನ ಉಳಿಸಿಕೊಂಡಿದೆ. ಬೀದರ್ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಇನ್ನು, ಹುಡುಗಿಯರು ಪ್ರತೀ ವರ್ಷದಂತೆ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ. ಬಾಲಕರು ಶೇ. 44.74 ಫಲಿತಾಂಶ ಪಡೆದರೆ, ಶೇ.60.28ರಷ್ಟು ಬಾಲಕಿಯರು ತೇರ್ಗಡೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

100% ಫಲಿತಾಂಶ:
ರಾಜ್ಯಾದ್ಯಂತ 37 ಕಾಲೇಜುಗಳು 100% ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿವೆ. ಪೂರ್ಣ ಫಲಿತಾಂಶ ಪಡೆದ ಕಾಲೇಜುಗಳಲ್ಲಿ ಸರಕಾರೀ ಕಾಲೇಜುಗಳ ಸಂಖ್ಯೆ ಮೂರು. ಕಳೆದ ವರ್ಷದಂದು 41 ಕಾಲೇಜುಗಳು ಪೂರ್ಣ ಫಲಿತಾಂಶ ಪಡೆದಿದ್ದವು.

ಶೂನ್ಯ:
ಈ ಬಾರಿ ಒಟ್ಟು 132 ಕಾಲೇಜುಗಳು ಶೂನ್ಯ ಫಲಿತಾಂಶ ಪಡೆದಿವೆ.

ಇದೇ ವೇಳೆ ಫೇಲ್ ಆದ ಶೇ. 47.62ರಷ್ಟು ವಿದ್ಯಾರ್ಥಿಗಳು ಮುಂದಿನ ತಿಂಗಳು ಸಪ್ಲಿಮೆಂಟರಿ ಪರೀಕ್ಷೆ ಮೂಲಕ ತೇರ್ಗಡೆಯಾಗಲು ಮತ್ತೊಂದು ಅವಕಾಶ ಹೊಂದಿದ್ದಾರೆ. ಸಪ್ಲಿಮೆಂಟರಿ ಪರೀಕ್ಷೆಯ ಶುಲ್ಕ ಪಾವತಿಗೆ ಜೂನ್ 23 ಕೊನೆಯ ದಿನಾಂಕವಾಗಿದೆ.

ಇತರ ಪ್ರಮುಖ ವಿಷಯ:
ಮೇ 19: ಉತ್ತರ ಪತ್ರಿಕೆಯ ಸ್ಕ್ಯಾನಿಂಗ್​ ಪ್ರತಿ ಪಡೆಯಲು ಕೊನೆ ದಿನ
400 ರೂ.: ಸ್ಕ್ಯಾನಿಂಗ್​ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ ನಿಗದಿಪಡಿಸಿರುವ ಮೊತ್ತ
ಮೇ 24: ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನ
1,260 ರೂ.: ಪ್ರತಿ ವಿಷಯದ ಮರುಮೌಲ್ಯಮಾಪನದ ಶುಲ್ಕ.
ಮೇ 24: ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆ ದಿನ
ಅಂಕಗಳ ಮರು ಎಣಿಕೆಗೆ ಯಾವುದೇ ಶುಲ್ಕ ಇಲ್ಲ.
ಜೂ. 23: ಸಪ್ಲಿಮೆಂಟರಿ ಪರೀಕ್ಷೆಯ ಶುಲ್ಕ ಪಾವತಿಗೆ ಕೊನೆಯ ದಿನಾಂಕ

ಪಿಯುಸಿ ಫಲಿತಾಂಶವನ್ನು ವೀಕ್ಷಿಸಲು ಈ ವೆಬ್'ಸೈಟ್'ಗಳಿಗೆ ಭೇಟಿ ನೀಡಿ. PUE.KAR.NIC.IN ಮತ್ತು KARRESULTS.NIC.IN ಕ್ಲಿಕ್ ಮಾಡಿ.