2005ರಲ್ಲಿ ಇದೇ ವೇಳೆ 35.9 ಡಿ. ದಾಖಲು ಈವರೆಗಿನ ದಾಖಲೆ | ಮಾರ್ಚ್, ಏಪ್ರಿಲ್‌'ನಲ್ಲಿ ಭಾರೀ ಉಷ್ಣಾಂಶ ದಾಖಲು ಸಾಧ್ಯತೆ

ಬೆಂಗಳೂರು: ಬೇಸಿಗೆ ಆರಂಭದಲ್ಲೇ ಬೆಂಗಳೂರು ನಗರ ಧಗ ಧಗ..! ಹೌದು, ಬೇಸಿಗೆ ಆರಂಭವಾಗಿ ಇನ್ನೂ ಹೆಚ್ಚು ದಿನ ಕಳೆದಿಲ್ಲ. ಅದಾಗಲೇ ಬೆಂಗಳೂರು ನಗರದಲ್ಲಿ ಬಿಸಿಲು ಝಳಿಪಿಸುತ್ತಿದೆ. ಕಳೆದ ಎರಡು ದಿನಗಳಲ್ಲಿ ಬೆಂಗಳೂರಿನ ಉಷ್ಣಾಂಶವು ಗರಿಷ್ಠ 35ರ ಗಡಿ ದಾಟಿದೆ. ಶುಕ್ರವಾರ ಬೆಂಗಳೂರಿನಲ್ಲಿ ಗರಿಷ್ಠ 35.5 ಮತ್ತು ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದರೆ, ಶನಿವಾರ ಉಷ್ಣಾಂಶ ಗರಿಷ್ಠ 34.9, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಪರಿಣಾಮ ನಗರದಲ್ಲಿ ಜನತೆ ಬಿಸಿಲ ಧಗೆಯಿಂದ ತತ್ತರಿಸಿ ಹೋಗಿದ್ದಾರೆ.

ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ನಗರದಲ್ಲಿ ಉಷ್ಣಾಂಶ 35ರ ಗಡಿ ದಾಟಿಸುವ ಸಾಧ್ಯತೆ ಇದೆ. ಮುಂದಿನ ಆರು ದಿನಗಳಲ್ಲಿ ಉಷ್ಣಾಂಶ ಗರಿಷ್ಠ 35 ಮತ್ತು ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ಗೆ ಏರುವ ಮುನ್ಸೂಚನೆ ಇದೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಫೆ.26ರಂದು ಗರಿಷ್ಠ 35, ಕನಿಷ್ಠ 19, ಫೆ.27ರಂದು ಗರಿಷ್ಠ 35, ಕನಿಷ್ಠ 19, ಫೆ.28ರಂದು ಗರಿಷ್ಠ 34, ಕನಿಷ್ಠ 19, ಮಾ.1ರಂದು ಗರಿಷ್ಠ 34, ಕನಿಷ್ಠ 18, ಮಾ.2ರಂದು ಗರಿಷ್ಠ 34, ಕನಿಷ್ಠ 18 ಮತ್ತು ಮಾ.3ರಂದು ಗರಿಷ್ಠ 34 ಹಾಗೂ ಕನಿಷ್ಠ 18 ಡಿಗ್ರೆ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಹಾಗೆಯೇ, ಕಳೆದ ವರ್ಷ ಇದೇ ಸಮಯದಲ್ಲಿ ಗರಿಷ್ಠ 35.5 ಮತ್ತು ಕನಿಷ್ಠ 16.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಈವರೆಗೆ ಅತ್ಯಧಿಕ ಉಷ್ಣಾಂಶ ದಾಖಲಾಗಿರುವುದು 2005ರಲ್ಲಿ. ಆಗ 35.9 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಆದರೆ, 12 ವರ್ಷಗಳ ಹಿಂದೆ ದಾಖಲಾಗಿದ್ದ ಗರಿಷ್ಠ ಉಷ್ಣಾಂಶವಷ್ಟು(0.4 ಡಿಗ್ರಿ ಸೆಲ್ಸಿಯಸ್‌ ಕಡಿಮೆ) ಶುಕ್ರವಾರವೇ ದಾಖಲಾಗಿ ಹೋಗಿದೆ. 

ಅಂದರೆ ಗರಿಷ್ಠ 35.5 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಸಮಾಧಾನಕರ ಸಂಗತಿ ಎಂದರೆ ಶನಿವಾರ ಒಂದೂವರೆ ಡಿಗ್ರಿ ಸೆಲ್ಸಿಯೆಸ್‌ ಕಡಿಮೆ ಉಷ್ಣಾಂಶವು ದಾಖಲಾಯಿತು. ಆದರೂ ಸೂರ್ಯನ ಪ್ರಖರತೆಯಿಂದ ಜನ ನರಳುವುದು ಮಾತ್ರ ತಪ್ಪಲಿಲ್ಲ.

ಬಿಸಿಲ ಬಿಸಿಗೆ ಜನ ತತ್ತರ: ಫೆ.24 ಮತ್ತು ಫೆ.25ರಂದು (ಶಕ್ರವಾರ) ಬೆಳಗ್ಗೆ 8 ಗಂಟೆಯಿಂದಲೇ ಬಿಸಿಲ ತಾಪ ಹೆಚ್ಚಿದ್ದರಿಂದ ನೆಲ ಕಾದ ಹೆಂಚಾಗಿತ್ತು. ಬಿಸಿ ಗಾಳಿ ಬೀಸುತ್ತಿರುವುದರಿಂದ ಜನ ತತ್ತರಿಸಿ ಹೋದರು. ಸಮಯ ಕಳೆದಂತೆ ಸತತವಾಗಿ ಉಷ್ಣಾಂಶ ಹೆಚ್ಚುತ್ತಿರುವುದರಿಂದ ಜನ ಮಧ್ಯಾಹ್ನ 12ರ ನಂತರ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕಿದರು. ಇನ್ನು ಜನ ಮನೆಯಿಂದ ಹೊರಗಡೆ ಓಡಾಡುವುದೇ ಕಷ್ಟವಾಗಿ ಪರಿಣಮಿಸಿತು. ಶಿವರಾತ್ರಿ ಹಬ್ಬದ ಅಂಗವಾಗಿ ಶುಕ್ರವಾರ ರಜೆ ಇದ್ದ ಹಿನ್ನೆಲೆಯಲ್ಲಿ ಬಹಳಷ್ಟುಜನ ಮನೆಯಲ್ಲಿಯೇ ಊಳಿದುಕೊಂಡು ಸಂಜೆ 6ರ ನಂತರವೇ ಮನೆಯಿಂದ ಆಚೆ ಬಂದರು. ಇದರಿಂದ ಬಹುತೇಕ ರಸ್ತೆಗಳು ಜನರಿಲ್ಲದೇ ಬಿಕೋ ಎನ್ನುತ್ತಿದ್ದವು.

ಇನ್ನು ಮನೆಯಿಂದ ಹೊರ ಬಂದ ಜನರು ಬಿಸಿಲ ಝಳದಿಂದ ತಪ್ಪಿಸಿಕೊಳ್ಳಲು ಮರ, ಬಸ್‌ನಿಲ್ದಾಣ ಮತ್ತು ಕಟ್ಟಡಗಳನ್ನು ಆಶ್ರಯಿಸಿದರು. ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಮಳೆಗಾಲಕ್ಕೆ ಮಾತ್ರ ಸೀಮಿತವಾಗಿದ್ದ ಕೊಡೆಗಳನ್ನು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಲು ಬಳಸಿದರು. ರಸ್ತೆಯಲ್ಲಿ ಓಡಾಡುತ್ತಿದ್ದ ಪುರುಷರು-ಯುವಕರು ತಲೆಗೆ ಸ್ಕಾಪ್‌ರ್‍ ಕಟ್ಟಿಕೊಂಡು ಓಡಾಡುತ್ತಿದ್ದರು. 

ಹಾಗೆಯೇ, ಬಿಸಿಲ ಶಾಖವನ್ನು ತಾಳಲಾರದೆ ಎಳನೀರು, ತಂಪು ಪಾನೀಯದ ಮೊರೆಯನ್ನು ಹೋಗುತ್ತಿದ್ದಾರೆ. ನಗರದ ಬಹುತೇಕ ಎಳನೀರು, ಜ್ಯೂಸ್‌ ಮಳಿಗೆಗಳ ಮುಂದೆ ಜನಜಂಗುಳಿ ಕಂಡು ಬರುತ್ತಿದೆ.

(epaper.kannadaprabha.in)