ರಾಜ್ಯದಲ್ಲಿವೆ 18 ಸಾವಿರ ಶಿಥಿಲಾವಸ್ಥೆಯ ಶಾಲೆಗಳು | ಕಳೆದ ವರ್ಷ ದುರಸ್ತಿ ಮಾಡುವ ಉತ್ಸಾಹ ತೋರಿದ್ದ ಶಿಕ್ಷಣ ಇಲಾಖೆ ಈಗ ಗಪ್‌ಚುಪ್
ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ 18 ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳು ಕಟ್ಟಡ ದುರಸ್ತಿಗಾಗಿ ಸರ್ಕಾರಕ್ಕೆ ಮೊರೆ ಇಟ್ಟಿವೆ.
ಇದೇ ಸಂದರ್ಭದಲ್ಲಿ ರಾಜ್ಯಾದ್ಯಂತ ಇತ್ತೀಚೆಗೆ ಸುರಿದ ದಾಖಲೆ ಮಳೆಯಿಂದ ಮತ್ತಷ್ಟು ಶಾಲೆಗಳು ಶಿಥಿಲಾವಸ್ಥೆ ತಲುಪುವ ಆತಂಕದಲ್ಲಿ ತರಗತಿಗಳನ್ನು ನಡೆಸುತ್ತಿವೆ. ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿರುವ ಹಳೆಯ ಕಟ್ಟಡಗಳು ಮಳೆಯಿಂದ ಯಾವಾಗ ಬೀಳುವುದೋ ಎಂಬ ದುಗುಡದಲ್ಲಿಯೇ ಶಿಕ್ಷಕರು ಬೋಧಿಸುತ್ತಿದ್ದಾರೆ. ಆದರೆ, ಶಿಕ್ಷಣ ಇಲಾಖೆ ಮಾತ್ರ ಈ ಬಗ್ಗೆ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಳ್ಳದೇ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಕಳೆದ ವರ್ಷ ಮಳೆಗಾಲದ ಆರಂಭದಲ್ಲಿಯೇ ಬೆಳಗಾವಿ ಜಿಲ್ಲೆಯ ಯಮಕನಮರಡಿಯ ಸರ್ಕಾರಿ ಶಾಲೆ ಗೋಡೆ ಕುಸಿದು ಇಬ್ಬರು ಮಕ್ಕಳು ಮೃತಪಟ್ಟಿದ್ದ ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿದ್ದ ಇಲಾಖೆ ದುರಸ್ತಿ ಮಾಡುವ ಹುಮ್ಮಸ್ಸು ತೋರಿಸಿತ್ತು. ಅಲ್ಲಲ್ಲಿ ದುರಸ್ತಿ ಕಾರ್ಯ ಕೂಡಾ ಕೈಗೊಂಡಿತ್ತು. ಆದರೆ ಈ ಉತ್ಸಾಹ ದೀರ್ಘಕಾಲ ಉಳಿಯದಿರುವುದು ಶಿಥಿಲಾವಸ್ಥೆಯ ಶಾಲೆಗಳು ಯಥಾಸ್ಥಿತಿಯಲ್ಲಿಯೇ ಮುಂದುವರಿಯುವಂತೆ ಮಾಡಿದೆ.
ಅಬ್ಬರದ ಮಳೆಗೆ ಭೂಮಿಯು ಸಂಪೂರ್ಣವಾಗಿ ನೆಂದಿರುವುದರಿಂದ ನೂರಾರು ಶಾಲೆಗಳ ಗೋಡೆಗಳು ಬಿರುಕು ಬಿಟ್ಟಿವೆ, ಕೆಲವು ಶಾಲೆಗಳ ಗೋಡೆಗಳು ಯಾವುದೇ ಸಂದರ್ಭದಲ್ಲಿ ಬೀಳುವ ಸ್ಥಿತಿಯಲ್ಲಿವೆ. ಬಿರುಗಾಳಿ ಮಳೆಗೆ ಹೆಂಚುಗಳು ಒಡೆದುಹೋಗಿವೆ.
ಆದ್ಯತೆ ಮೇಲೆ ಶಾಲೆಗಳ ದುರಸ್ತಿ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಶಾಲೆಗಳ ದುರಸ್ತಿ ಕುರಿತು ಕ್ರಿಯಾ ಯೋಜನೆ ರೂಪಿಸಲಾಗುತ್ತಿದ್ದು, ಬಳಿಕ ಕ್ರಮ ಕೈಗೊಳ್ಳಲಾಗುವುದು.
ಡಾ ಪಿ ಸಿ ಜಾಫರ್ ಆಯುಕ್ತ,
ಸಾರ್ವಜನಿಕ ಶಿಕ್ಷಣ ಇಲಾಖೆ.
ಕೆಲವು ಶಾಲೆಗಳಲ್ಲಿ ಛಾವಣಿಗೆ ಹೊದಿಸಿದ್ದ ತಗಡುಗಳು ಕೂಡ ಹಾರಿ ಹೋಗಿವೆ, ಛಾವಣಿ ಸೋರುವಿಕೆ, ಕುಸಿದ ಗೋಡೆ, ಬಿರುಕು ಬಿಟ್ಟ ಗೋಡೆಗಳಿರುವ ಈ ಶಾಲೆಗಳು ಶೌಚಾಲಯ, ಕುಡಿಯುವ ನೀರು, ಕಾಂಪೌಂಡ್ ಇಲ್ಲದಿರುವುದು ಸೇರಿದಂತೆ ಅನೇಕ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಇದೀಗ ಸುರಿಯುತ್ತಿರುವ ಮಳೆಯಿಂದಲೂ ಶಾಲಾ ಕಟ್ಟಡಗಳ ಸ್ಥಿತಿ ಇನ್ನಷ್ಟು ಹದಗೆಡುತ್ತಿದೆ.
2017ರ ಸೆಪ್ಟೆಂಬರ್ ಅಂತ್ಯಕ್ಕೆ ಇಲಾಖೆಗೆ ಬಂದಿರುವ ಮಾಹಿತಿ ಪ್ರಕಾರ 18,776 ಶಾಲೆಗಳು ದುರಸ್ತಿ ಕಾರ್ಯಕ್ಕಾಗಿ ಮನವಿ ಮಾಡಿವೆ. ಇವುಗಳಲ್ಲದೆ ಈಗಲೋ ಆಗಲೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಹಾಗೂ ಸಂಪೂರ್ಣ ಹಾಳಾಗಿರುವ 5525 ಪ್ರಾಥಮಿಕ ಮತ್ತು 955 ಪ್ರೌಢ ಶಾಲೆಗಳನ್ನು ನೆಲಸಮಸಮಗೊಳಿಸಿ ಹೊಸದಾಗಿ ನಿರ್ಮಿಸುವಂತೆ ಮನವಿ ಸಲ್ಲಿಕೆಯಾಗಿದೆ.
ಬೇಸಿಗೆ ರಜೆಯಲ್ಲೇ ಕ್ರಮ ಕೈಗೊಳ್ಳಬೇಕಿತ್ತು: ಪ್ರತಿ ಸೆಪ್ಟೆಂಬರ್ ಹಾಗೂ ಡಿಸೆಂಬರ್ನಲ್ಲಿ ಶಾಲೆಗಳ ಸ್ಥಿತಿಗತಿ ಕುರಿತು ಪ್ರತಿ ಶಾಲೆಗಳು ವರದಿ ಮಾಡುತ್ತವೆ. ಈ ವರದಿ ಪ್ರಕಾರ ಇಲಾಖೆಯು ಬೇಸಿಗೆ ರಜೆಯಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕಿತ್ತು. ಶಿಕ್ಷಣ ಇಲಾಖೆಯು ಇಂತಹ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ರಾಜ್ಯದ ಹೈದರಾಬಾದ್ ಕರ್ನಾಟಕ ಪ್ರದೇಶದ ಕಲಬುರಗಿ ಜಿಲ್ಲೆಯಲ್ಲಿ 1069, ಬಳ್ಳಾರಿ- 1042, ಬೀದರ್- 1689, ಕೊಪ್ಪಳ- 820 ದುರಸ್ತಿಗಾಗಿ ಕಾಯುತ್ತಿವೆ.
ಇನ್ನು ಬೆಂಗಳೂರು ವಿಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ತವರು ಮೈಸೂರು ಜಿಲ್ಲೆಯಲ್ಲಿ 1515 ಪ್ರಾಥಮಿಕ ಮತ್ತು 230 ಪ್ರೌಢ ಶಾಲೆಗಳು ದುರಸ್ತಿ ಕೈಗೊಳ್ಳುವಂತೆ ಮನವಿ ಮಾಡಿವೆ.
(ಸಾಂದರ್ಭಿಕ ಚಿತ್ರ)
