ಸ್ಪೀಕರ್​ ಕೋಳಿವಾಡ ಅವ್ರ ಪುತ್ರಿಯರಿಗೆ ನಿವೇಶನ ಭಾಗ್ಯ ಕರುಣಿಸಿದ್ದ ಕರ್ನಾಟಕ ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅವ್ಯವಹಾರಗಳು ನಡೆದಿರುವುದು ಸಾಬೀತಾಗಿದೆ. ಈ ಸಂಘದಲ್ಲಿ ನಡೆದಿರುವ ಹತ್ತಾರು ಅಕ್ರಮಗಳ ಕುರಿತು ವಿಚಾರಣೆ ವರದಿ ಸಲ್ಲಿಸಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರು, ಈ ಸಂಬಂಧ ಸಂಘದ ಅಧ್ಯಕ್ಷರು ಸೇರಿ ಒಟ್ಟು 9 ಮಂದಿಯನ್ನು ಸಂಘದ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ.

ಬೆಂಗಳೂರು(ಎ.11): ಸ್ಪೀಕರ್​ ಕೋಳಿವಾಡ ಅವ್ರ ಪುತ್ರಿಯರಿಗೆ ನಿವೇಶನ ಭಾಗ್ಯ ಕರುಣಿಸಿದ್ದ ಕರ್ನಾಟಕ ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ ಅವ್ಯವಹಾರಗಳು ನಡೆದಿರುವುದು ಸಾಬೀತಾಗಿದೆ. ಈ ಸಂಘದಲ್ಲಿ ನಡೆದಿರುವ ಹತ್ತಾರು ಅಕ್ರಮಗಳ ಕುರಿತು ವಿಚಾರಣೆ ವರದಿ ಸಲ್ಲಿಸಿರುವ ಸಹಕಾರ ಸಂಘಗಳ ಜಂಟಿ ನಿಬಂಧಕರು, ಈ ಸಂಬಂಧ ಸಂಘದ ಅಧ್ಯಕ್ಷರು ಸೇರಿ ಒಟ್ಟು 9 ಮಂದಿಯನ್ನು ಸಂಘದ ಸದಸ್ಯತ್ವದಿಂದ ಅನರ್ಹಗೊಳಿಸಿದ್ದಾರೆ.

ಕರ್ನಾಟಕ ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಈಗ ಮತ್ತೊಮ್ಮೆ ಸುದ್ದಿಯಾಗಿದೆ. ಸ್ಪೀಕರ್​ ಕೋಳಿವಾಡ ಅವ್ರ ಪುತ್ರಿಯರಿಗೆ ನಿವೇಶನಗಳನ್ನು ನೀಡಿ ವಿವಾದಕ್ಕೆಡೆಯಾಗಿದ್ದ ಈ ಸಂಘದಲ್ಲಿ ಕೋಟ್ಯಂತರ ರೂಪಾಯಿ ಮೊತ್ತದಲ್ಲಿ ಅವ್ಯವಹಾರ ನಡೆದಿರುವುದನ್ನು ಸಹಕಾರ ಸಂಘಗಳ ಜಂಟಿ ನಿಬಂಧಕರು ಪತ್ತೆ ಹಚ್ಚಿದ್ದಾರೆ.

ಅಕ್ರಮ ಪತ್ತೆ!

ವಿಧಾನಮಂಡಲ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಗಸ್ತಿ ಕೆಂಪನಹಳ್ಳಿ, ಕೋಗಿಲು ಮತ್ತು ಅಗ್ರಹಾರಗಳಲ್ಲಿ ಬಡಾವಣೆ ನಿರ್ಮಿಸಲು ಉದ್ದೇಶಿಸಿತ್ತು. ಜಯಸೂರ್ಯ ಡೆವಲಪರ್ಸ್​ ಜತೆ ಜಂಟಿ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿತ್ತು. ಇದಕ್ಕಾಗಿ ಈ ಸಂಘ, ಬ್ಯಾಂಕ್​ ಗ್ಯಾರಂಟಿ ಇಲ್ಲದೆಯೇ ಡೆವಲಪರ್ಸ್​'ಗೆ 52 ಕೋಟಿ 94 ಲಕ್ಷ ರೂ.ಗಳನ್ನು ಅಡ್ವಾನ್ಸ್​ ರೂಪದಲ್ಲಿ ನೀಡಿರುವುದು ಪತ್ತೆಯಾಗಿದೆ. ಅಲ್ಲದೇ, ಯಾವುದೇ ರೀತಿಯಲ್ಲೂ ಕರಾರನ್ನೂ ಮಾಡಿಕೊಂಡಿಲ್ಲ.

ಅರ್ಹರಿಗೆ ನಿವೇಶನ ಹಂಚಿಕೆಯಲ್ಲಿ ವಿಫಲ: ಸಹ ಸದಸ್ಯರಿಗೇ ಹೆಚ್ಚುವರಿ ನಿವೇಶನ ಭಾಗ್ಯ

ಈ ಸಂಘದಲ್ಲಿ ಸಹ ಸದಸ್ಯರಾಗಿದ್ದ ಸ್ಪೀಕರ್​ ಕೋಳಿವಾಡ ಅವರ ಪುತ್ರಿಯರಿಗೆ ಒಂದೇ ದಿನದಲ್ಲಿ ನಿವೇಶನಗಳನ್ನು ರಿಜಿಸ್ಟ್ರೇಷನ್​ ಮಾಡಿಸಿದ್ದ ಈ ಸೊಸೈಟಿ, ಮೂಲ ಸದಸ್ಯರಿಗೆ ನಿವೇಶನ ಹಂಚಿಕೆ ಮಾಡಿರಲಿಲ್ಲ. ಅಷ್ಟೇ ಅಲ್ಲ, ಸೀನಿಯಾರಿಟಿಯನ್ನು ಪಾಲಿಸಿರಲಿಲ್ಲ.

ಅನುಮೋದನೆ ಇಲ್ಲದೆ ಸಿ.ಎ.ನಿವೇಶನ ಮಾರಾಟ

ಈ ಸಂಘ 2004ನೇ ಸಾಲಿನಲ್ಲಿ ಲಗ್ಗೆರೆ ಬಡಾವಣೆಯಲ್ಲಿ ಸಿ.ಎ.ನಿವೇಶನಗಳನ್ನು ರಚಿಸಿತ್ತು. ಈ ಸಿ.ಎ.ನಿವೇಶನಗಳನ್ನು ಯಾವ್ದೇ ಕಾರಣಕ್ಕೂ ಮಾರಾಟ ಆಗ್ಲಿ. ಗುತ್ತಿಗೆ ಕೊಡೋದಾಗ್ಲಿ ಮಾಡ್ಲಿಕ್ಕೆ ಅವಕಾಶಗಳೇ ಇಲ್ಲ. ಆದರೂ ಸಹಕಾರ ಸಂಘಗಳ ರಿಜಿಸ್ಟ್ರಾರ್​ ಅವರ ಅನುಮೋದನೆ ಇಲ್ದೆ ಸಿ.ಎ.ನಿವೇಶನವನ್ನು ಮಾರಾಟ ಮಾಡಿರೋದು ತನಿಖೆಯಿಂದ ಪತ್ತೆಯಾಗಿದೆ.

ನಿವೇಶನಕ್ಕೆ ಠೇವಣಿ ಪಡೆಯಲಿಲ್ಲ: ಒಬ್ಬೊಬ್ಬರಿಗೆ ಒಂದೊಂದು ರೇಟು

ಗಸ್ತಿ ಕೆಂಪನಹಳ್ಳಿ ಮತ್ತು ಅಗ್ರಹಾರದ ವಿವಿಧ ಹಂತಗಳಲ್ಲಿ ಬಡಾವಣೆ ನಿರ್ಮಾಣ ಮಾಡಲು ಡೆವಲಪರ್ಸ್​ ಜತೆ ಈ ಸಂಘ ಒಪ್ಪಂದ ಮಾಡ್ಕೊಂಡಿತ್ತು. ಆದ್ರೆ, ಕರಾರಿನ ಪ್ರಕಾರ ನಿವೇಶನ ಠೇವಣಿಗಳನ್ನೇ ಪಡ್ಕೊಂಡಿರಲಿಲ್ಲ. ಅಲ್ಲದೆ, ನಿವೇಶನದ ಠೇವಣಿ ಹಣವನ್ನು ಹೆಚ್ಚಿದ್ದು ಒಬ್ಬೊಬ್ಬ ಸದಸ್ಯರಿಗೆ ಒಂದೊಂದ್​ ರೇಟ್​'ನ್ನು ಫಿಕ್ಸ್​ ಮಾಡಿ, ಸಂಘಕ್ಕೆ ನಷ್ಟ ಮಾಡಿದೆ.

ಖರೀದಿಯಾಗಿದ್ದು 16 ಎಕರೆ

ಜಯಸೂರ್ಯ ಡೆವಲಪರ್ಸ್​ ಸಂಘದ ಪರವಾಗಿ ಒಟ್ಟು 16 ಎಕರೆಯನ್ನು ಯಲಹಂಕದಲ್ಲಿ ಖರೀದಿ ಮಾಡಿತ್ತು. ಆದ್ರೆ ಇದುವರೆಗೂ ಖರೀದಿಯಾಗಿರುವ ಜಮೀನಿನಲ್ಲಿ ಬಡಾವಣೆ ರಚನೆ ಸಂಬಂಧ ಒಂದೇ ಒಂದು ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆದರೂ ಡೆವಲಪರ್ಸ್​ ವಿರುದ್ಧ ಸಂಘದ ಆಡಳಿತ ಮಂಡಳಿ ಒಂದೇ ಒಂದು ಕ್ರಮ ಜರುಗಿಸಿಲ್ಲ ಅಂತ ವಿಚಾರಣಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವರದಿ: ಜಿ.ಮಹಾಂತೇಶ್​, ಸುವರ್ಣನ್ಯೂಸ್​