ನವದೆಹಲಿ(ಫೆ.05): ಸಮಾಜದ ರಕ್ಷಕರೆನಿಸಿಕೊಳ್ಳುವ ಕಾಪ್ ಪಂಚಾಯತ್'ಗಳ ವಿರುದ್ಧ ಕೋಪಗೊಂಡಿರುವ ಸರ್ವೋಚ್ಛ ನ್ಯಾಯಾಲಯ ಇಬ್ಬರು ಪ್ರೌಢರ ಮದುವೆಯಲ್ಲಿ  ಮಧ್ಯ ಪ್ರವೇಶಿಸಲು ನಿಮಗೆ ಅಧಿಕಾರ ಕೊಟ್ಟವರ್ಯಾರು ಎಂದು ಕೆಂಡ ಕಾರಿದೆ.

ಸರ್ಕಾರೇತರ ಸಂಸ್ಥೆ ಶಕ್ತಿ ವಾಹಿನಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶರೊಳಗೊಂಡ ತ್ರಿಸದಸ್ಯ ಪೀಠ, ವಿವಾಹಗಳು ನಿರರ್ಥಕ, ಉಪಯುಕ್ತ ಹಾಗೂ ಉತ್ತಮ ಹಾಗೂ ಕೆಟ್ಟದ್ದು ಎಂದು ಹೇಳಲು ನಾವು ನೀವು ಯಾರು. ಇದರಿಂದ ಹೊರಗಿರಬೇಕಷ್ಟೆ. ಇಬ್ಬರು ಪ್ರೌಢರಾಗಿದ್ದರೆ, ನಿಮಗೆ ವಿವಾಹ ನಿಲ್ಲಿಸಲು ಯಾವುದೇ ಅಧಿಕಾರವಿಲ್ಲ' ಎಂದು ತಿಳಿಸಿದೆ.

ವಯಸ್ಕ ಯುವಕ-ಯುವತಿಯರು ಮದುವೆಯಾಗಲು ತಯಾರಾದರೆ ಕಾಪ್ ಪಂಚಾಯಿತಿ,ಪಂಚಾಯತ್ ಅಥವಾ ಯಾವುದೇ ಸಮಾಜಕ್ಕೆ ಅವರ ಮಧ್ಯ ಪ್ರವೇಶಿಸುವ ಹಕ್ಕಿಲ್ಲ. ಕೇಂದ್ರ ಸರ್ಕಾರ ಕೂಡ ಈ ರೀತಿಯ ನೈತಿಕ ಪೊಲೀಸ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು'ಎಂದು ಪೀಠ ತಿಳಿಸಿದೆ.

ಉತ್ತರ ಪ್ರದೇಶದಲ್ಲಿ ವಿವಾಹದಲ್ಲಿ ಖಾಪ್ ಪಂಚಾಯತ್'ಗಳು ಹೆಚ್ಚು ಮಧ್ಯ ಪ್ರವೇಶಿಸುತ್ತವೆ. ಮರ್ಯಾದಾ ಹತ್ಯೆಗಳು ಇವುಗಳಿಂದಲೇ ಸಂಭವಿಸುತ್ತಿವೆ. ಈ ರೀತಿಯ ಮರ್ಯಾದಾ ಹತ್ಯೆಗಳನ್ನು ಹೇಗೆ ತಡೆಗಟ್ಟಬೇಕು ಎಂಬ ಬಗ್ಗೆ ಮಾರ್ಗದರ್ಶನ ಸೂತ್ರ ರಚಿಸುವ ಬಗ್ಗೆ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ನೇತೃತ್ವದ ತ್ರಿಸದ್ಯತ್ವ ಪೀಠ ವಿಚಾರಣೆ ನಡೆಸುತ್ತಿದ್ದು, ಫೆ.16ರಂದು ಪೂರ್ಣ ಆದೇಶ ಬರುವ ನಿರೀಕ್ಷೆಯಿದೆ.