ಆಫ್ಸಾ ಜಾರಿಯಲ್ಲಿರುವ ಪ್ರದೇಶಗಳಲ್ಲಿನ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ಕನಿಷ್ಠ 300 ಮಂದಿ ಸೇನಾ ಸಿಬ್ಬಂದಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ನವದೆಹಲಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರಗಳ ಕಾಯ್ದೆ(ಆಫ್ಸಾ) ಜಾರಿಯಲ್ಲಿರುವ ಪ್ರದೇಶಗಳಲ್ಲಿನ ಸೇನಾ ಕಾರ್ಯಾಚರಣೆಗಳಿಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ಕನಿಷ್ಠ 300 ಮಂದಿ ಸೇನಾ ಸಿಬ್ಬಂದಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಈ ಸಂಬಂಧ ಆಗಸ್ಟ್ 20ರಂದು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಅಂಕಿತ ನೀಡಿದೆ.
ಅತ್ಯಂತ ಪ್ರಕ್ಷುಬ್ಧ ಮತ್ತು ಬಂಡಾಯ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ವಿರುದ್ಧ ಪ್ರಕರಣ ದಾಖಲಾಗಿರುವುದು ಮತ್ತು ಪೊಲೀಸ್ ಹಾಗೂ ಸಿಬಿಐ ತನಿಖೆ ನಡೆಸಿರುವುದು ಸಶಸ್ತ್ರ ಪಡೆಗಳಿಗೆ ದೊಡ್ಡ ಹಿನ್ನಡೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಸಿಜೆಐ ದೀಪಕ್ ಮಿಶ್ರಾ ನ್ಯಾಯಪೀಠದ ಮುಂದೆ ಯೋಧರ ಪರವಾಗಿ ನ್ಯಾಯವಾದಿ ಐಶ್ವರ್ಯಾ ಭಾಟಿ ಅರ್ಜಿ ದಾಖಲಿಸಿದ್ದಾರೆ.
ಆಫ್ಸಾ ಕಾಯ್ದೆ ಜಾರಿಯಲ್ಲಿರುವ ಪ್ರದೇಶದಲ್ಲಿ ತಾವು ಕೈಗೊಂಡ ಕಾರ್ಯಾಚರಣೆ ಬಗ್ಗೆ ಯೋಧರಿಗೆ ವಿನಾಯ್ತಿ ಇರುತ್ತದೆ. ಇದರ ಹೊರತಾಗಿಯೂ ಅವರ ವಿರುದ್ಧ ಕೇಸು ದಾಖಲಿಸುವುದು ಕಾನೂನಿಗೆ ವಿರುದ್ಧ ಎಂದು ಯೋಧರು ವಾದಿಸಿದ್ದಾರೆ.
