ಶಿಯಾ ಪಂಗಡದ ಭಾಗವಾಗಿರುವ  ದಾವೂದಿ ಬೊಹ್ರಾಗಳು ಹೆಚ್ಚಾಗಿ ವಾಸವಿರುವ ರಾಜ್ಯಗಳ ಸರ್ಕಾರಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ 4 ಕೇಂದ್ರೀಯ ಇಲಾಖೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.     

ನವದೆಹಲಿ (ಮೇ.08): ದಾವೂದಿ ಬೊಹ್ರಾ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ಹೆಣ್ಮಕ್ಕಳ ಲಿಂಗಚ್ಛೇದನ (Female Genital Mutilation-FMG) ಸಂಪ್ರದಾಯವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್, ಅದನ್ನು ಮಹತ್ವವಾದ ಸೂಕ್ಷ್ಮ ವಿಚಾರವೆಂದು ಅಭಿಪ್ರಾಯಪಟ್ಟಿದೆ.

ಶಿಯಾ ಪಂಗಡದ ಭಾಗವಾಗಿರುವ ದಾವೂದಿ ಬೊಹ್ರಾಗಳು ಹೆಚ್ಚಾಗಿ ವಾಸವಿರುವ ರಾಜ್ಯಗಳ ಸರ್ಕಾರಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ 4 ಕೇಂದ್ರೀಯ ಇಲಾಖೆಗಳಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ಈ ಕುರಿತು ಸುಪ್ರಿಂ ಕೋರ್ಟ್’ನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾ. ಜೆಎಸ್ ಖೆಹರ್ ನೇತೃತ್ವದ ಪೀಠವು, ಬೇಸಿಗೆ ರಜೆಯ ನಂತರ ವಿಚಾರಣೆಯನ್ನು ಮುಂದೂಡಿದೆ.

ದೆಹಲಿಯ ವಕೀಲೆ ಸುನಿತಾ ತಿವಾರಿ ಎಂಬವರು ಬೊಹ್ರಾ ಸಮಾಜದಲ್ಲಿರುವ ಹೆಣ್ಣಿನ ಲಿಂಗಚ್ಛೇದನ ಸಂಪ್ರದಾಯವನ್ನು ದೇಶದಾದ್ಯಂತ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸುಪ್ರೀಂ ಕೋರ್ಟ್’ನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಸಲ್ಲಿಸಿದ್ದಾರೆ.