ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ  ಜನರ ಮೇಲೆ ದೌರ್ಜನ್ಯದ ಆರೋಪ ಕೇಳಿ ಬಂದಾಕ್ಷಣ  ಕೇಸು ದಾಖಲಿಸುವ ಮತ್ತು ತತ್‌ಕ್ಷಣವೇ ಆರೋಪಿಗಳನ್ನು ಬಂಧಿಸುವುದಕ್ಕೆ ತಡೆ ಹೇರಿದ ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು, ಇಡೀ ಕಾಯ್ದೆಯನ್ನೇ ದುರ್ಬಲಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಅಲ್ಲದೆ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಸೋಮವಾರವೇ ಅಫಿಡವಿಟ್ ಸಲ್ಲಿಸಲೂ ಅದು ನಿರ್ಧರಿಸಿದೆ.

ನವದೆಹಲಿ (ಏ. 02):  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಮೇಲೆ ದೌರ್ಜನ್ಯದ ಆರೋಪ ಕೇಳಿ ಬಂದಾಕ್ಷಣ ಕೇಸು ದಾಖಲಿಸುವ ಮತ್ತು ತತ್‌ಕ್ಷಣವೇ ಆರೋಪಿಗಳನ್ನು ಬಂಧಿಸುವುದಕ್ಕೆ ತಡೆ ಹೇರಿದ ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪು, ಇಡೀ ಕಾಯ್ದೆಯನ್ನೇ ದುರ್ಬಲಗೊಳಿಸಲಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ. ಅಲ್ಲದೆ ನ್ಯಾಯಾಲಯದ ಈ ತೀರ್ಪಿನ ವಿರುದ್ಧ ಸೋಮವಾರವೇ ಅಫಿಡವಿಟ್ ಸಲ್ಲಿಸಲೂ ಅದು ನಿರ್ಧರಿಸಿದೆ.

ನ್ಯಾಯಾಲಯದ ತೀರ್ಪಿನಿಂದಾಗಿ ಜನರಿಗೆ ಕಾನೂನಿನ ಹೆದರಿಕೆ ಕಡಿಮೆಯಾಗುವುದರ ಜೊತೆಗೆ, ಹಿಂಸೆ ಹೆಚ್ಚುವ ಸಾಧ್ಯತೆ ಇದೆ. ಜೊತೆಗೆ ತುಳಿತಕ್ಕೊಳಗಾದ ಸಮುದಾಯಗಳನ್ನು ರಕ್ಷಿಸುವ ಕಾನೂನು ದುರ್ಬಲವಾಗಲಿದೆ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ತನ್ನ ಪುನರ್‌ ಪರಿಶೀಲನಾ ಅರ್ಜಿಯಲ್ಲಿ ಮನವರಿಕೆ ಮಾಡುವ ಯತ್ನ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳನ್ನು ತಕ್ಷಣವೇ ದಾಖಲಿಸಬೇಕು ಮತ್ತು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕೆಂಬ ನಿಯಮವನ್ನು ನಿಷೇಧಿಸಿ ಕೋರ್ಟ್ ಇತ್ತೀಚೆಗೆ ತೀರ್ಪೊಂದನ್ನು ನೀಡಿತ್ತು. ತೀರ್ಪಿಗೆ ಸಂಬಂಧಿಸಿ ಕಳೆದ ವಾರ ಕೇಂದ್ರ ಸಚಿವರುಗಳಾದ ರಾಮ್‌ವಿಲಾಸ್ ಪಾಸ್ವಾನ್ ಮತ್ತು ಥಾವರ್‌ಚಂದ್ ಗೆಹ್ಲೋಟ್ ನೇತೃತ್ವದಲ್ಲಿ ಎನ್‌ಡಿಎ ಸಂಸದರ ನಿಯೋಗ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿತ್ತು.

ದಲಿತ ಸಂಘಟನೆಗಳಿಂದ ಇಂದು ಭಾರತ ಬಂದ್‌'ಗೆ ಕರೆ:

ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸುವ ಸುಪ್ರೀಂ ಕೋರ್ಟ್ ಆದೇಶವನ್ನು ಖಂಡಿಸಿ ಏ.೨ರಂದು ವಿವಿಧ ದಲಿತ ಸಮುದಾಯಗಳು ಭಾರತ್ ಬಂದ್‌ಗೆ ಕರೆ ನೀಡಿವೆ. ‘ಸಂವಿಧಾನ ಬಚಾವೋ ಸಂಘರ್ಷ ಸಮಿತಿ’ ಬಂದ್‌ಗೆ ಕರೆ ನೀಡಿದ್ದು, ಅನಂತರ ‘ಅಖಿಲ ಭಾರತ ಆದಿ ಧರ್ಮ ಸಾಧು ಸಮಾಜ’ ಮತ್ತಿತರ ದಲಿತ ಸಮುದಾ ಯಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಆದರೆ ಬಂದ್‌ಅನ್ನು ಹಿಂತೆಗೆದು ಕೊಳ್ಳುವಂತೆ ಕೇಂದ್ರ ಕಾನೂನು ಸಚಿವಾಲಯ ಮನವಿ ಮಾಡಿ, ‘ನರೇಂದ್ರ ಮೋದಿ ಸರ್ಕಾರ ಪರಿಶಿಷ್ಟ ಜಾತಿ/ಪಂಗಡದವರ
ಅಬಿವೃದ್ಧಿಗೆ ಬದ್ಧವಾಗಿದ್ದು, ಸುಪ್ರೀಂ ಆದೇಶವನ್ನು ಪುನರ್ ಪರಿಶೀಲಿಸಲಾಗುತ್ತದೆ’ ಎಂದು ಟ್ವೀಟ್ ಮಾಡಿದೆ.