ಸಿಬಿಐನ ವಿಶೇಷ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಆಸ್ತಾನ ನೇಮಕಾತಿಯನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ನವದೆಹಲಿ: ಸಿಬಿಐನ ವಿಶೇಷ ನಿರ್ದೇಶಕರಾಗಿ ಹಿರಿಯ ಐಪಿಎಸ್ ಅಧಿಕಾರಿ ರಾಕೇಶ್ ಆಸ್ತಾನ ನೇಮಕಾತಿಯನ್ನು ರದ್ದುಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

ಆಸ್ತಾನ ನೇಮಕಾತಿಯಲ್ಲಿ ಕೇಂದ್ರ ಸರ್ಕಾರವು ಯಾವುದೇ ನಿಯಮಗಳನ್ನು ಉಲ್ಲಂಗಿಸಿಲ್ಲವೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಸಿಬಿಐನ ವಿಶೇಷ ನಿರ್ದೇಶಕ ಹುದ್ದೆಗೆ ಆಸ್ತಾನ ನೇಮಿಸುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಕಾಮನ್ ಕಾಸ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಇತ್ತೀಚೆಗೆ ಕಂಪನಿಯೊಂದಕ್ಕೆ ಆದಾಯ ತೆರಿಗೆ ಇಲಾಖೆಯು ದಾಳಿ ನಡೆಸಿದ ಸಂದರ್ಭದಲ್ಲಿ ಪತ್ತೆಯಾದ ಡೈರಿಯಲ್ಲಿ ಆಸ್ಯಾನ ಹೆಸರು ಉಲ್ಲೇಖಿಸಲಾಗಿತ್ತು. ಸಿಬಿಐಯು ಕಂಪನಿ ವಿರುದ್ಧ ಅಕ್ರಮ ಹಣಕಾಸು ವ್ಯವಹಾರ ಪ್ರಕರಣವನ್ನು ದಾಖಲಿಸಿದೆ ಎಂದು ಸಂಸ್ಥೆಯು ವಾದಿಸಿತ್ತು.

ಸಿಬಿಐನ ವಿಶೇಷ ನಿರ್ದೇಶಕ ಹುದ್ದೆಗೆ ರಾಕೇಶ್ ಆಸ್ತಾನ ಹೆಸರನ್ನು ಕಳೆದ ಅ.26ರಂದು ಕೇಂದ್ರ ಜಾಗೃತಿ ಆಯುಕ್ತ ಕೆ.ವಿ. ಚೌಧರಿ ನೇತೃತ್ವದ ಸಮಿತಿಯು ಸರ್ವಾನುಮತದಿಂದ ಅಂತಿಮಗೊಳಿಸಿತ್ತು.

ಕಾಮನ್ ಕಾಸ್ ಎಂಬ ಸರ್ಕಾರೇತರ ಸಂಸ್ಥೆಯು ಸುಪ್ರೀಂ ಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಆಸ್ತಾನ ಅವರ ನೇಮಕವನ್ನು ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕೂಡಾ ವಿರೋಧಿಸಿದ್ದಾರೆ ಎಂದು ಹೇಳಲಾಗಿದೆ.

ತನಿಖೆಯ ಹಂತದಲ್ಲಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಆಸ್ತಾನ ಹೆಸರು ಕೇಳಿಬಂದಿದೆ ಎಂದು ವರ್ಮಾ ಹೇಳಿದ್ದರು ಎಂದು ಅರ್ಜಿಯಲ್ಲಿ ಹೇಳಲಾಗಿದೆ.