ಸುಪ್ರೀಂ ಆದೇಶದಂತೆ ಹೆಚ್ಚುತ್ತಾ ವೃದ್ಧರ ಪಿಂಚಣಿ?
ದೇಶದ ಹಿರಿಯ ನಾಗರಿಕರ ಪಿಂಚಣಿ ಹೆಚ್ಚಿಸಬೇಕು ಹಾಗೂ ಬಡತನ ರೇಖೆಗಿಂತ ಕೆಳಗಿರುವ ವೃದ್ಧರಿಗೆ ಜಿಲ್ಲೆಗೊಂದು ಪುನರ್ವಸತಿ ಕೇಂದ್ರ ಸ್ಥಾಪಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನವದೆಹಲಿ: ದೇಶದಲ್ಲಿರುವ ಹಿರಿಯ ನಾಗರಿಕರಿಗೆ ನೀಡಲಾಗುತ್ತಿರುವ ಪಿಂಚಣಿ ಹಣ ಏರಿಕೆ ಮಾಡಬೇಕು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರಿಕರಿಗಾಗಿ ಪ್ರತಿ ಜಿಲ್ಲೆಗೊಂದು ಹಿರಿಯ ನಾಗರಿಕ ಪುನರ್ವಸತಿ ಕೇಂದ್ರ ಸ್ಥಾಪನೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಈ ಬಗ್ಗೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಮದನ್ ಬಿ. ಲೋಕೂರ್ ಹಾಗೂ ದೀಪಕ್ ಗುಪ್ತಾ ಅವರಿದ್ದ ಪೀಠ, ‘ಕುಟುಂಬ ಸದಸ್ಯರಿಂದ ತಿರಸ್ಕಾರಕ್ಕೊಳಗಾದ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಿದೆ. ಅಲ್ಲದೆ, ಅವರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು,’ ಎಂದು ಹೇಳಿದರು. ಪ್ರಸ್ತುತ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಇಂದಿರಾಗಾಂಧಿ ರಾಷ್ಟ್ರೀಯ ಹಿರಿಯ ನಾಗರಿಕರ ಪಿಂಚಣಿ ಯೋಜನೆಯಡಿ ಕೇಂದ್ರ ಸರ್ಕಾರ 60-79ರ ಒಳಗಿನ ಹಿರಿಯ ನಾಗರಿಕರಿಗೆ ಪ್ರತೀ ತಿಂಗಳು 200 ರು. ಪಿಂಚಣಿ ನೀಡುತ್ತಿದೆ. ಅಲ್ಲದೆ, 80 ವರ್ಷ ಮೇಲ್ಪಟ್ಟಹಿರಿಯ ನಾಗರಿಕರಿಗೆ 500 ರು. ನೀಡಲಾಗುತ್ತಿದೆ. 2007ರಲ್ಲಿ ಜಾರಿಗೆ ಬಂದ ಬಳಿಕ ಇದುವರೆಗೂ ಪಿಂಚಣಿ ಮೊತ್ತವನ್ನು ಪರಿಷ್ಕರಣೆ ಮಾಡಿಯೇ ಇಲ್ಲ. ಹಾಗಾಗಿ, ಈ ಮೊತ್ತವನ್ನು ಹೆಚ್ಚಿಸಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೊತ್ತಕ್ಕೆ ರಾಜ್ಯ ಸರ್ಕಾರಗಳೂ ಹಣ ಸೇರಿಸಿ ವೃದ್ಧರಿಗೆ ನೀಡುತ್ತದೆ.