ರಫೇಲ್ ಡೀಲ್‌ನಲ್ಲಿ ನಡೆದಿದೆ ಎನ್ನಲಾದ ಹಗರಣ ಇದೀಗ ದಿನಕ್ಕೊಂದು ತಿರುವು ಪಡೆದಕೊಳ್ಳುತ್ತಿದೆ. ಇದನ್ನೇ ಬಳಸಿಕೊಳ್ಳುತ್ತಿರುವ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದ್ದಾರೆ.  

ಬೆಂಗಳೂರು(ಅ.22): ರಫೇಲ್‌ ಡೀಲ್‌ನಲ್ಲಿ ಹಗರಣ ನಡೆದಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್‌ ಹೇಳುತ್ತಿದೆ. ಇತ್ತ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಒಪ್ಪಂದದಲ್ಲಿ ಯಾವುದೇ ಹಗರಣ ನಡೆದಿಲ್ಲ. ಇದು ಸರ್ಕಾರ-ಸರ್ಕಾರದ ನಡುವಿನ ಒಪ್ಪಂದ ಎಂದು ಪದೇಪದೇ ಹೇಳುತ್ತಿದೆ. 

ಆದರೆ ರಫೇಲ್‌ ಒಪ್ಪಂದದಲ್ಲಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ ಎಂದು ಎಬಿಪಿ ಸುದ್ದಿ ವಾಹಿನಿ ವರದಿ ಮಾಡಿರುವ ಸ್ಕ್ರೀನ್‌ ಶಾಟ್‌ ಚಿತ್ರ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಆ ದೃಶ್ಯದಲ್ಲಿ ‘ಬ್ರೇಕಿಂಗ್‌ ನ್ಯೂಸ್‌, ರಫೇಲ್‌ ಒಪ್ಪಂದ ವಿಚಾರವಾಗಿ ಮೋದಿ ವಿರುದ್ಧ ದೂರು ದಾಖಲಿಸಿಕೊಳ್ಳುವಂತೆ ಸುಪ್ರೀಂ ಆದೇಶ’ ಎಂದಿದೆ.

ಆದರೆ ಸುಪ್ರೀಂಕೋರ್ಟ್‌ ಮೋದಿ ವಿರುದ್ಧ ಕೇಸು ದಾಖಲಿಸುವಂತೆ ಆದೇಶ ನೀಡಿದ್ದು ನಿಜವೇ ಎಂದು ಪರಿಶೀಲಿಸಿದಾಗ ಇದು ಸುಳ್ಳುಸುದ್ದಿ, ಗ್ರಾಫಿಕ್ಸ್‌ ಮೂಲಕ ಈ ರೀತಿಯ ಇಮೇಜನ್ನು ಸಿದ್ಧಪಡಿಸಲಾಗಿದೆ ಎಂಬುದು ಪತ್ತೆಯಾಗಿದೆ. ಈ ಬಗ್ಗೆ ಸ್ಪಷ್ಟೀಕರಣಕ್ಕೆ ಎಬಿಪಿ ಸುದ್ದಿವಾಹಿನಿಯ ಮ್ಯಾನೇಜಿಂಗ್‌ ಡೈರೆಕ್ಟರ್‌ ರಜ್ನೀಶ್‌ ಅಹುಜಾ ಅವರನ್ನೇ ಸಂಪರ್ಕಿಸಿದ್ದು, ಅವರು ‘ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಚಿತ್ರ ಎಬಿಪಿ ವಾಹಿನಿಯ ಫೋಟೋ ಅಲ್ಲ. 

ಎಬಿಪಿಯ ಫಾಂಟ್‌ಸೈಜ್‌ಗೂ ಇಲ್ಲಿ ಹರಿದಾಡುತ್ತಿರುವ ಚಿತ್ರದಲ್ಲಿರುವ ಫಾಂಟ್‌ ಸೈಜ್‌ಗೂ ಸಾಕಷ್ಟುವ್ಯತ್ಯಾಸವಿದೆ. ಫೋಟೋಶಾಪ್‌ ಮೂಲಕ ನಕಲಿ ಚಿತ್ರವನ್ನು ಸಿದ್ಧಪಡಿಲಾಗಿದೆ’ ಎಂದಿದ್ದಾರೆ. ಅಲ್ಲದೆ ಬೂಮ್‌ ಈ ಕುರಿತು ಯುಟ್ಯೂಬ್‌ನಲ್ಲಿ ಪರಿಶೀಲಿಸಿದ್ದು, ಅಲ್ಲಿ ಇತ್ತೀಚೆಗೆ ರಫೇಲ್‌ ಒಪ್ಪಂದ ಪ್ರಕ್ರಿಯೆಯ ಮಾಹಿತಿಯನ್ನು ಸುಪ್ರೀಂಕೋರ್ಟ್‌ ಕೇಳಿದ್ದ ಸುದ್ದಿ ಮಾತ್ರ ವರದಿಯಾಗಿದ್ದು ಕಂಡುಬಂದಿದೆ. ಹಾಗಾಗಿ ಈ ಸುದ್ದಿ ಸುಳ್ಳು ಎಂಬುದು ಸ್ಪಷ್ಟ.