ಕೇಂದ್ರ ತನಿಖಾ ದಳ(ಸಿಬಿಐ)ದ ಹಂಗಾಮಿ ನಿರ್ದೇಶಕರನ್ನಾಗಿ ಗುಜರಾತ್ ಖೇಡರ್‌ನ ರಾಖೇಶ್ ಅಸ್ಥನಾ ಅವರ ನೇಮಕ ಮಾಡಿರುವ ಕುರಿತಂತೆಯೂ ಸ್ಪಷ್ಟನೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಅದು ನೋಟಿಸ್ ನೀಡಿದೆ.

ನವದೆಹಲಿ(ಡಿ.9): ಸಿಬಿಐನ ಹಿರಿಯ ಅಧಿಕಾರಿ, ಕರ್ನಾಟಕ ಮೂಲದ ಆರ್ ಕೆ ದತ್ತಾ ಅವರನ್ನು ಕೋರ್ಟ್ ಅನುಮತಿ ಇಲ್ಲದೇ ವರ್ಗಾಯಿಸಿದ್ದು ಏಕೆ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಪ್ರಶ್ನೆ ಮಾಡಿದೆ.

ಅಲ್ಲದೆ, ಕೇಂದ್ರ ತನಿಖಾ ದಳ(ಸಿಬಿಐ)ದ ಹಂಗಾಮಿ ನಿರ್ದೇಶಕರನ್ನಾಗಿ ಗುಜರಾತ್ ಖೇಡರ್‌ನ ರಾಖೇಶ್ ಅಸ್ಥನಾ ಅವರ ನೇಮಕ ಮಾಡಿರುವ ಕುರಿತಂತೆಯೂ ಸ್ಪಷ್ಟನೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ಅದು ನೋಟಿಸ್ ನೀಡಿದೆ. ಒಂದು ವಾರದೊಳಗೆ ಸ್ಪಷ್ಟನೆ ನೀಡುವಂತೆ ಕೋರಿದ್ದು, ಮುಂದಿನ ವಿಚಾರಣೆಯನ್ನು ಡಿ.16ಕ್ಕೆ ಮುಂದೂಡಲಾಗಿದೆ.

ಈ ಕುರಿತು ಎನ್‌ಜಿಒ ಸಲ್ಲಿಸಿದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ ಕುರಿಯನ್ ಜೋಸ್ ಮತ್ತು ಆರ್. ಎ. ನಾರಿಮನ್ ಅವರಿದ್ದ ಪೀಠ, ‘‘ಪ್ರತಿಷ್ಟಿತ 2ಜಿ ಮತ್ತು ಕಲ್ಲಿದ್ದಲು ಹಗರಣಗಳ ಕುರಿತು ಮೇಲ್ವಿಚಾರಣೆ ನಡೆಸುತ್ತಿದ್ದ ಹಿರಿಯ ಅಧಿಕಾರಿ ಆರ್. ಕೆ. ದತ್ತಾ ಅವರನ್ನು ಕೋರ್ಟ್ ಅನುಮತಿಯಿಲ್ಲದೆ ವರ್ಗಾಯಿಸಿದ್ದು ಸರಿಯೇ,’’ ಎಂದು ಪ್ರಶ್ನಿಸಿದೆ.‘‘ಹಿರಿಯ ಅಧಿಕಾರಿ ದತ್ತಾ ಅವರ ಅಧಿಕಾರವನ್ನು ಮೊಟಕುಗೊಳಿಸಿ ಅವರನ್ನು ಏಕೆ ವರ್ಗ ಮಾಡಿರುವಿರಿ ಮತ್ತು ಸಿಬಿಐನ ಮಧ್ಯಂತರ ನಿರ್ದೇಶಕರನ್ನಾಗಿ ರಾಖೇಶ್ ಅಸ್ಥನಾ ಅವರನ್ನು ಹೇಗೆ ಆಯ್ಕೆ ಮಾಡಿದ್ದೀರಿ,’’ ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ಪೀಠ ಸೂಚಿಸಿದೆ.