ಶ್ರೀನಗರ[ಆ.18]: ಜಮ್ಮು- ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದ ಹಿನ್ನೆಲೆಯಲ್ಲಿ ಜನರ ಓಡಾಟಕ್ಕೆ ವಿಧಿಸಲಾಗಿದ್ದ ನಿರ್ಬಂಧ ಸಡಿಲಿಸಲಾಗಿದೆ. ಕಾಶ್ಮೀರ ಕಣಿವೆಯ ಕೆಲವು ಭಾಗಗಳಲ್ಲಿ ಸ್ಥಿರ ದೂರವಾಣಿ ಸೇವೆಗಳೂ ಪುನಾರಂಭಗೊಂಡಿವೆ.

50,000ಕ್ಕೂ ಹೆಚ್ಚು ಸ್ಥಿರ ದೂರವಾಣಿಗಳು ಈಗ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಜಮ್ಮು, ಸಾಂಬಾ, ಕಠುವಾ, ಉಧಂಪುರ್‌ ಮತ್ತು ರಿಯಾಸಿ ಜಿಲ್ಲೆಗಳಲ್ಲಿ 2ಜಿ ಮೊಬೈಲ್‌ ಇಂಟರ್‌ನೆಟ್‌ ಸೇವೆಯನ್ನು ಒದಗಿಸಲಾಗುತ್ತಿದೆ. ಪರಿಸ್ಥಿತಿ ನೋಡಿಕೊಂಡು 3ಜಿ ಹಾಗೂ 4ಜಿ ಸೇವೆ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿರ್ಭಂದ ಸಡಿಲಿಸಿರುವ ಹಿನ್ನೆಲೆಯಲ್ಲಿ ಶನಿವಾರ ಮುಂಜಾನೆಯಿಂದ ಕೆಲವು ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿವೆ. ರಸ್ತೆಯಲ್ಲಿ ವಾಹನ ಸಂಚಾರ ಹೆಚ್ಚಳಗೊಂಡಿದೆ. ಸೋಮವಾರದಿಂದ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿವೆ. ಇದೇ ವೇಳೆ ಕಾಶ್ಮೀರ ಕಣಿವೆಯಲ್ಲಿ ಭದ್ರತಾ ವ್ಯವಸ್ಥೆ ಎಂದಿನಂತೆ ಮುಂದುವರಿದಿದೆ.