ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗೆ ಪತ್ರ

First Published 30, Mar 2018, 7:05 AM IST
SC judge seeks full court discussion on govt Interference
Highlights

ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯೆ ಇನ್ನೊಂದು ಸಂಘರ್ಷ ಆರಂಭವಾಗುವ ಲಕ್ಷಣಗಳು ತಲೆದೋರಿದೆ.

ನವದೆಹಲಿ : ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ ಮಧ್ಯೆ ಇನ್ನೊಂದು ಸಂಘರ್ಷ ಆರಂಭವಾಗುವ ಲಕ್ಷಣಗಳು ತಲೆದೋರಿದೆ. ‘ಕೇಂದ್ರ ಸರ್ಕಾರವು ನ್ಯಾಯಾಧೀಶರ ನೇಮಕದಲ್ಲಿ ಮಧ್ಯಪ್ರವೇಶಿಸುತ್ತಿದೆ’ ಎಂದು ಆರೋಪಿಸಿರುವ ಸುಪ್ರೀಂ ಕೋರ್ಟ್‌ ನ್ಯಾಯಾಧೀಶ ನ್ಯಾ ಜೆ.ಚಲಮೇಶ್ವರ ಅವರು ಈ ಸಂಬಂಧ 22 ಸದಸ್ಯರ ನ್ಯಾಯಾಧೀಶರ ಪೂರ್ಣ ಪೀಠದ ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ವಿಶೇಷವೆಂದರೆ ತಮ್ಮ ಈ ಆರೋಪಕ್ಕೆ ಪುರಾವೆಯಾಗಿ ಚಲಮೇಶ್ವರ್‌ ಅವರು ಕರ್ನಾಟಕದಲ್ಲಿ ನಡೆದ ಘಟನಾವಳಿಗಳ ಉದಾಹರಣೆಯನ್ನು ನೀಡಿದ್ದಾರೆ. ಕರ್ನಾಟಕದಲ್ಲಿನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಪಿ. ಕೃಷ್ಣಭಟ್‌ ಅವರು ಕರ್ನಾಟಕ ಹೈಕೋರ್ಟ್‌ಗೆ ಪದೋನ್ನತಿ ಹೊಂದಬೇಕು ಎಂದು ಕೊಲಿಜಿಯಂ (ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ಗೆ ಜಡ್ಜ್‌ ನೇಮಿಸುವ/ವರ್ಗಾಯಿಸುವ ಉನ್ನತ ನ್ಯಾಯಾಧೀಶರ ಸಮಿತಿ) ಮಾಡಿದ ಮರುಶಿಫಾರಸನ್ನು ಕೇಂದ್ರ ಸರ್ಕಾರ ತಡೆಹಿಡಿದುದನ್ನು ಪ್ರಶ್ನಿಸಿರುವ ನ್ಯಾ ಚಲಮೇಶ್ವರ್‌, ‘ನ್ಯಾಯಾಂಗದ ವ್ಯವಹಾರದಲ್ಲಿ ಈ ರೀತಿ ಸರ್ಕಾರ ಕೈ ಆಡಿಸುವುದು ಸಲ್ಲ’ ಎಂದು 5 ಪುಟಗಳ ಪತ್ರದಲ್ಲಿ ಕಿಡಿಕಾರಿದ್ದಾರೆ.

ಅಲ್ಲದೆ, ಕೃಷ್ಣ ಭಟ್‌ ಅವರ ವಿರುದ್ಧ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರು ಮಾಡಿದ ಆರೋಪದ ಬಗ್ಗೆ ಕೇಂದ್ರ ಸರ್ಕಾರದ ಕೋರಿಕೆಯ ಮೇರೆಗೆ ಮರುತನಿಖೆಗೆ ಆದೇಶಿಸಿದ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ ದಿನೇಶ್‌ ಮಹೇಶ್ವರಿ ಅವರ ಕ್ರಮವನ್ನೂ ಪ್ರಶ್ನಿಸಿದ್ದಾರೆ. ಇದರ ಬೆನ್ನಲ್ಲೇ ಕೃಷ್ಣ ಭಟ್‌ ಅವರ ವಿರುದ್ಧದ ತನಿಖೆಗೆ ನ್ಯಾ ಮಹೇಶ್ವರಿ ಮಂಗಳ ಹಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಇದೇ ವಿಷಯದ ಬಗ್ಗೆ ಚರ್ಚೆಗೆ 22 ಸದಸ್ಯರ ಸುಪ್ರೀಂ ಕೋರ್ಟ್‌ನ ಪೂರ್ಣ ಪ್ರಮಾಣದ ನ್ಯಾಯಾಧೀಶರ ಸಭೆ ಕರೆದು ಚರ್ಚಿಸಬೇಕು ಎಂದು ಮುಖ್ಯ ನ್ಯಾಯಾಧೀಶ ನ್ಯಾ ದೀಪಕ್‌ ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ. ಆದರೆ ಈ ಪತ್ರಕ್ಕೆ ನ್ಯಾ ಮಿಶ್ರಾ ಈವರೆಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ ಎನ್ನಲಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟ್‌ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ನ್ಯಾ ಮಿಶ್ರಾ ವಿರುದ್ಧ ಚಲಮೇಶ್ವರ ಅವರು ಬಂಡೆದ್ದಿದ್ದರು.

ಏನಿದು ಪ್ರಕರಣ?:

ಪಿ.ಕೃಷ್ಣ ಭಟ್‌ ಅವರು ಹಿಂದೆ ಬೆಳಗಾವಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕೆಲವು ವಕೀಲರು ಜಿಲ್ಲಾ ನ್ಯಾಯಾಲಯವೊಂದರಲ್ಲಿದ್ದ ಮಹಿಳಾ ನ್ಯಾಯಾಂಗ ಅಧಿಕಾರಿಯೊಬ್ಬರ ವಿರುದ್ಧ ದುರ್ವರ್ತನೆ ಆರೋಪ ಮಡಿದ್ದರು. ಈ ಸಂಬಂಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕರ್ನಾಟಕ ಹೈಕೋರ್ಟು, ಭಟ್‌ ಅವರಿಗೆ ಸೂಚಿಸಿತ್ತು. ತನಿಖೆ ನಡೆಸಿದ ಭಟ್‌ ಅವರು ಮಹಿಳಾ ನ್ಯಾಯಾಂಗ ಅಧಿಕಾರಿಯದ್ದೇ ತಪ್ಪು ಎಂದು ಹೈಕೋರ್ಟ್‌ಗೆ ವರದಿ ನೀಡಿದ್ದರು.

ಈ ನಡುವೆ, ಭಟ್‌ ಅವರು ಆಗಿನ ಅತಿ ಹಿರಿಯ ಜಿಲ್ಲಾ ನ್ಯಾಯಾಧೀಶರಾದ ಕಾರಣ ಅವರಿಗೆ ಹೈಕೋರ್ಟ್‌ ನ್ಯಾಯಾಧೀಶ ಹುದ್ದೆಗೆ ಬಡ್ತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿತ್ತು.

ಈ ನಡುವೆ, ಭಟ್‌ ವಿರುದ್ಧವೇ ತಿರುಗಿಬಿದ್ದ ಈ ಮಹಿಳಾ ನ್ಯಾಯಾಂಗ ಅಧಿಕಾರಿ, ‘ಭಟ್‌ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅನಗತ್ಯವಾಗಿ ತನ್ನನ್ನು ಟಾರ್ಗೆಟ್‌ ಮಾಡಿಕೊಂಡಿದ್ದಾರೆ’ ಎಂದು ಸುಪ್ರೀಂಕೋರ್ಟ್‌ ಹಾಗೂ ಕೇಂದ್ರ ಸರ್ಕಾರಕ್ಕೆ ದೂರು ಸಲ್ಲಿಸಿದರು. ಈ ನಡುವೆ, ಈ ಅಧಿಕಾರಿಣಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಅಷ್ಟೇ ವೇಗವಾಗಿ ರಾಜೀನಾಮೆ ಹಿಂಪಡೆದರು. ಅಧಿಕಾರಿಣಿಯ ದೂರಿನ ಹಿನ್ನೆಲೆಯಲ್ಲಿ ಭಟ್‌ ಅವರ ಪದೋನ್ನತಿ ಶಿಫಾರಸನ್ನು ಕೇಂದ್ರ ಸರ್ಕಾರವು ಕೊಲಿಜಿಯಂಗೇ ವಾಪಸ್‌ ಕಳಿಸಿತು.

ಇದಾದ ನಂತರ ಮಹಿಳಾ ಅಧಿಕಾರಿ ನೀಡಿದ್ದ ದೂರನ್ನು ಆಧರಿಸಿ ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಾಧೀಶ ನ್ಯಾ ಟಿ.ಎಸ್‌. ಠಾಕೂರ್‌ ಅವರ ಆದೇಶದ ಮೇರೆಗೆ ನ್ಯಾ ಮಹೇಶ್ವರಿ ಅವರಿಗಿಂತ ಮುನ್ನ ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ ಎಸ್‌.ಕೆ.ಮುಖರ್ಜಿ ಅವರು ತನಿಖೆ ನಡೆಸಿದರು. ನವೆಂಬರ್‌ 2016ರಲ್ಲಿ ಮುಖರ್ಜಿ ಅವರು ಭಟ್‌ ಅವರಿಗೆ ಕ್ಲೀನ್‌ಚಿಟ್‌ ನೀಡಿ, ‘ಮಹಿಳಾ ಅಧಿಕಾರಿಯ ದೂರು ಪೂರ್ವಾಗ್ರಹದಿಂದ ಕೂಡಿದೆ. ಭಟ್‌ ಅವರ ಚಾರಿತ್ರ್ಯವಧೆಗೆ ಯತ್ನಿಸುವ ದೂರು ಅದಾಗಿದ್ದು, ಅವರ ಪದೋನ್ನತಿ ತಡೆಯುವ ದುರುದ್ದೇಶ ಹೊಂದಿದೆ’ ಎಂದು ಅಭಿಪ್ರಾಯಪಟ್ಟರು. ಆಗ ಕೊಲಿಜಿಯಂ, ಭಟ್‌ ಅವರ ಪದೋನ್ನತಿಗೆ ಮರುಶಿಫಾರಸು ಮಾಡಿತು.

ಈ ನಡುವೆ, ಮಹಿಳಾ ಅಧಿಕಾರಿ ನೀಡಿದ ದೂರನ್ನು ಇನ್ನೂ ಇಟ್ಟುಕೊಂಡಿತ್ತು ಎನ್ನಲಾದ ಕೇಂದ್ರ ಕಾನೂನು ಸಚಿವಾಲಯ, ಈ ಬಗ್ಗೆ ಪರಿಶೀಲಿಸಿ ಎಂದು ಪುನಃ ಹೈಕೋರ್ಟ್‌ಗೆ ದೂರನ್ನು ರವಾನಿಸಿತು. ಇದನ್ನು ಆಧರಿಸಿ ಹೈಕೋರ್ಟ್‌ನ ಈಗಿನ ಮುಖ್ಯ ನ್ಯಾಯಾಧೀಶ ನ್ಯಾ ಮಹೇಶ್ವರಿ ಅವರು ಮರುತನಿಖೆಗೆ ಆದೇಶಿಸಿದರು. ಇದು ಈಗ ವಿವಾದಕ್ಕೆ ಕಾರಣವಾಗಿದ್ದು, ‘ಒಮ್ಮೆ ಪದೋನ್ನತಿಗೆ ಮರು ಶಿಫಾರಸಾದ ನಂತರ ಅದನ್ನು ಸರ್ಕಾರಕ್ಕೆ ಒಪ್ಪಿಕೊಳ್ಳದೇ ವಿಧಿಯಿಲ್ಲ. ಈ ರೀತಿ ಮರುತನಿಖೆಗೆ ಕೋರುವ ಅಧಿಕಾರ ಕೇಂದ್ರಕ್ಕಿಲ್ಲ. ಇದು ಕೊಲಿಜಿಯಂನಲ್ಲಿ ಸರ್ಕಾರ ಮೂಗು ತೂರಿಸುತ್ತಿರುವ ನಿದರ್ಶನ’ ಎಂಬುದು ನ್ಯಾ ಚಲಮೇಶ್ವರ್‌ ಅವರ ವಾದ.

loader