ಕನ್ನಡದಲ್ಲಿ ಡಬ್ ಆದ ಕಾರ್ಯಕ್ರಮಗಳಿಗೆ ಅವಕಾಶ ನೀಡದ ಫಿಲಂ ಚೇಂಬರ್‌, ಕರ್ನಾಟಕ ಟೆಲಿವಿಷನ್‌ ಅಸೊಸಿಯೇಷನ್‌ ಮುಂತಾದವುಗಳ ಕ್ರಮವನ್ನು ಪ್ರಶ್ನಿಸಿ ಕನ್ನಡ ಗ್ರಾಹಕರ ಕೂಟ, ಚೇತನ್‌ ಗಣೇಶ್‌ ಮತ್ತಿತರರು ಭಾರತೀಯ ಸ್ಪರ್ಧಾತ್ಮಕ ಆಯೋಗ( ಕಾಂಪಿಟೀಷನ್‌ ಕಮಿಷನ್‌ ಆಫ್‌ ಇಂಡಿಯಾ)ದ ಮೊರೆ ಹೋಗಿದ್ದರು.

ನವದೆಹಲಿ(ಏ.12) ಡಬ್ಬಿಂಗ್‌ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಫಿಲಂ ಚೇಂಬರ್‌ ಆಫ್‌ ಕಾಮರ್ಸ್‌ ಮಹತ್ವದ ಕಾನೂನು ಹೋರಾಟದಲ್ಲಿ ಪರಾಭವಗೊಂಡಿದೆ. ಈ ಮೂಲಕ ರಾಜ್ಯದಲ್ಲಿ ಅನ್ಯ ಭಾಷೆಗಳಿಂದ ಕನ್ನಡಕ್ಕೆ ಡಬ್‌ ಆಗುವ ಸಿನಿಮಾ ಮತ್ತು ಟಿವಿ ಕಾರ್ಯಕ್ರಮಗಳಿಗೆ ಅವಕಾಶ ಲಭಿಸಲಿದೆ.
ಕನ್ನಡದಲ್ಲಿ ಡಬ್ ಆದ ಕಾರ್ಯಕ್ರಮಗಳಿಗೆ ಅವಕಾಶ ನೀಡದ ಫಿಲಂ ಚೇಂಬರ್‌, ಕರ್ನಾಟಕ ಟೆಲಿವಿಷನ್‌ ಅಸೊಸಿಯೇಷನ್‌ ಮುಂತಾದವುಗಳ ಕ್ರಮವನ್ನು ಪ್ರಶ್ನಿಸಿ ಕನ್ನಡ ಗ್ರಾಹಕರ ಕೂಟ, ಚೇತನ್‌ ಗಣೇಶ್‌ ಮತ್ತಿತರರು ಭಾರತೀಯ ಸ್ಪರ್ಧಾತ್ಮಕ ಆಯೋಗ( ಕಾಂಪಿಟೀಷನ್‌ ಕಮಿಷನ್‌ ಆಫ್‌ ಇಂಡಿಯಾ)ದ ಮೊರೆ ಹೋಗಿದ್ದರು. ಈ ದೂರಿನ ವಿಚಾರಣೆಗೆ ಕೈಗೆತ್ತಿಕೊಂಡಿದ್ದ ಕಮಿಷನ್‌ ಫಿಲಂ ಚೇಂಬರ್‌ನ ಕ್ರಮ ಕಾನೂನಿನ ಉಲ್ಲಂಘನೆ ಎಂದು ಹೇಳಿದ್ದಷ್ಟೇ ಅಲ್ಲದೆ ಚೇಂಬರ್‌ ಮತ್ತು ಟಿವಿ ಅಸೋಸಿಯೇಷನ್‌ಗೆ ದಂಡ, ವಿಧಿಸಿ 2015ರ ಜುಲೈನಲ್ಲಿ ಆದೇಶ ನೀಡಿತ್ತು.

ಇದನ್ನು ಪ್ರಶ್ನಿಸಿ ಫಿಲಂ ಚೇಂಬರ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಸ್ಪರ್ಧಾತ್ಮಕ ಮೇಲ್ಮನವಿ ನ್ಯಾಯಮಂಡಳಿ (ಕಾಂಪಿಟೀಷನ್‌ ಅಪಲೆಚ್‌ ಟ್ರಿಬ್ಯುನಲ್‌) ವಜಾ ಗೊಳಿಸಿದೆ. ಸುಪ್ರೀಂಕೋರ್ಟ್‌ ಕದ ತಟ್ಟುವುದೊಂದೇ ಇನ್ನು ಫಿಲಂ ಚೇಂಬರ್‌ ಮುಂದೆ ಇರುವ ಏಕೈಕ ದಾರಿ.

ಡಬ್ ಆದ ಕಾರ್ಯಕ್ರಮ ಮತ್ತು ಸಿನಿಮಾಗಳಿಗೆ ನಿರ್ಬಂಧ ಹೇರಿದ್ದಕ್ಕಾಗಿ ವಿಧಿಸಲಾಗಿದ್ದ ದಂಡವನ್ನೂ ಎತ್ತಿ ಹಿಡಿಯಲಾಗಿದೆ. ಫಿಲಂ ಚೇಂಬರ್‌ಗೆ .16,82,204, ಕೆಟಿವಿಎಗೆ .1,74,293 ಮತ್ತು ಕರ್ನಾಟಕ ಚಲನ ಚಿತ್ರ ನಿರ್ಮಾಪಕರ ಸಂಘಕ್ಕೆ .1, 68, 124 ದಂಡ ವಿಧಿಸಲಾಗಿತ್ತು. ಕೆಟಿವಿಎ ಮತ್ತು ನಿರ್ಮಾಪಕಕ ಸಂಘ ತಮಗೆ ವಿಧಿಸಿದ್ದ ದಂಡವನ್ನು ಪ್ರಶ್ನಿಸಿರಲಿಲ್ಲ.

ನ್ಯಾ. ರಾಜೀವ್‌ ಖೇರ್‌ ಮತ್ತು ಸದಸ್ಯೆ ಅನಿತಾ ಕಪೂರ್‌ ನೀಡಿರುವ 60 ಪುಟಗಳ ತೀರ್ಪಿನಲ್ಲಿ ಫಿಲಂ ಚೇಂಬರ್‌ ಮತ್ತು ಟಿವಿ ಅಸೋಸಿಯೇಷನ್‌ ಡಬ್ ಕಾರ್ಯಕ್ರಮಗಳ ಪ್ರಸಾರ ತಡೆಯಲು ಕ್ರಮ ಕೈಗೊಂಡಿದ್ದು, ಇದು ಸ್ಫರ್ಧಾತ್ಮಕತೆಯ ಕಾನೂನುಗಳ ಉಲ್ಲಂಘನೆ ಎಂದು ಹೇಳಿದ್ದಾರೆ.
ಡಬ್ ಆದ ಸಿನಿಮಾ ಅಥವಾ ಟಿವಿ ಕಾರ್ಯಕ್ರಮಗಳನ್ನು ತಡೆಯಲು ಈ ಸಂಸ್ಥೆ ಗಳು ಒಟ್ಟಾಗಿಯೇ ಕೆಲಸ ಮಾಡಿವೆ. ಇದನ್ನು ಸಾಬೀತು ಪಡಿಸುವ ಸಾಕ್ಷ್ಯಗಳು ಇವೆ. ಮೈಸೂರು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಿ ಸದಸ್ಯರನ್ನು ಹೊಂದಿ ಫಿಲಂ ಚೇಂಬರ್‌ ಕಾರ್ಯ ನಿರ್ವಹಿಸುತ್ತಿದೆ ಎಂಬ ಅದರ ವಾದದಲ್ಲಿ ಹುರುಳಿಲ್ಲ. ಕರ್ನಾಟಕ ರಾಜ್ಯವ್ಯಾಪಿ ಫಿಲಂ ಚೇಂಬರ್‌ ಪ್ರಭಾವವಿದೆ ಎಂಬುದಕ್ಕೆ ಪುರಾವೆಯಿದೆ.
ಫಿಲಂ ಚೇಂಬರ್‌ ಸಲಹೆಗಾರನ ಪಾತ್ರಕ್ಕೆ ಮಾತ್ರ ಸೀಮಿತ. ಆಯೋಗದ ಮುಂದೆ ತಾನು ಯಾವತ್ತೂ ಡಬ್ ಸಿನಿಮಾಗಳನ್ನು ವಿರೋಧಿಸಿಲ್ಲ ಎಂದು ಚೇಂಬರ್‌ ಹೇಳಿಕೆ ನೀಡಿದೆ. ಟಿವಿ ಉದ್ಯಮಕ್ಕೂ ಫಿಲಂ ಚೆಂಬರ್‌ಗೂ ಯಾವುದೇ ಸಂಬಂಧವಿಲ್ಲ. ಚೇಂಬರ್‌ ಲಾಭದಾಯಕ ಸಂಸ್ಥೆಯಲ್ಲ. ತೆರಿಗೆ ವಿನಾಯಿತಿ ಇರುವ ಸಂಸ್ಥೆ ಎಂದು ಚೇಂಬರ್‌ ವಾದಿಸಿತ್ತು. ಆದರೆ ಚೇಂಬರ್‌ನ ವಾದವನ್ನು ನ್ಯಾಯಮಂಡಳಿ ಒಪ್ಪಿಲ್ಲ.
ಹಿರಿತೆರೆ, ಕಿರುತೆರೆ ಬೇರೆ ಬೇರೆಯಲ್ಲ. ಗ್ರಾಹಕರಿಗೆ ತಮಗೆ ಬೇಕಾದದ್ದನ್ನು ಆಯ್ಕೆ ಮಾಡುವ ಆಧಿಕಾರವಿದೆ. ಅಷ್ಟೇ ಅಲ್ಲದೆ ಹಿಂದಿಯ ಜನಪ್ರಿಯ ಧಾರವಾಹಿ ಮಹಾ ಭಾರತ ಬಂಗಾಳಿ ಭಾಷೆಗೆ ಡಬ್‌ ಆದ ಸಂದರ್ಭದಲ್ಲಿ ಕಾನೂನು ಹೋರಾಟ ನಡೆದಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪನ್ನು ಉಲ್ಲೇಖಿಸಲಾಗಿದೆ. ಭಾಷೆಯ ನೆಪದಲ್ಲಿ ಸ್ಪರ್ಧಾತ್ಮಕತೆಗೆ ಅಡ್ಡಿ ಉಂಟು ಮಾಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಬೇಕಿದ್ದ ಅಮೀರ್‌ ಖಾನ್‌ ಅವರ ಸತ್ಯಮೇವ ಜಯತೇ ಕಾರ್ಯಕ್ರಮ ಮತ್ತು ಕಾಫಿಶಾಪ್‌ ಸಿನಿಮಾ ಬಿಡುಗಡೆಯನ್ನು ತಡೆಯಲು ಈ ಸಂಸ್ಥೆಗಳು ಪ್ರಮುಖ ಪಾತ್ರವಹಿಸಿರುವ ದಾಖಲೆಗಳು ಲಭಿಸಿವೆ. 
ನ್ಯಾಯಮಂಡಳಿಯ ಆದೇಶವನ್ನು 60 ದಿನದೊಳಗೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.

ವರದಿ: ರಾಕೇಶ್ ಎನ್.ಎಸ್, ಕನ್ನಡಪ್ರಭ