ಸುಪ್ರೀಂಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕ ಮಾಡಬೇಕಾದ ನ್ಯಾಯಮೂರ್ತಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದರು
ನವದೆಹಲಿ(ಮಾ.03): ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಬಡ್ತಿ ಪಡೆಯಬೇಕಾದ ನ್ಯಾಯಾಧೀಶರ ಪಟ್ಟಿಯಿಂದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಬಳ್ಳಾರಿ ಮೂಲದ ಮಂಜುಳಾ ಚೆಲ್ಲೂರ್ ಹೆಸರು ಕೈಬಿಟ್ಟಿದ್ದಕ್ಕೆ ನ್ಯಾಯಾಧೀಶರ ನೇಮಕಕ್ಕೆ ಸಂಬಂಧಿಸಿದ ‘ಕೊಲಿಜಿಯಂ’ ಸದಸ್ಯರೊಬ್ಬರಿಂದಲೇ ಆಕ್ಷೇಪ ವ್ಯಕ್ತವಾಗಿದೆ.
ಸುಪ್ರೀಂಕೋರ್ಟ್ನ ಹಿಂದಿನ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ನೇಮಕ ಮಾಡಬೇಕಾದ ನ್ಯಾಯಮೂರ್ತಿಗಳ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದರು. ಅದರಲ್ಲಿ ಕನ್ನಡಿಗರಾದ ನ್ಯಾ ಮೋಹನ ಶಾಂತನಗೌಡರ್, ನ್ಯಾ ಅಬ್ದುಲ್ ನಜೀರ್ ಜತೆಯಲ್ಲೇ ನ್ಯಾ ಮಂಜುಳಾ ಚೆಲ್ಲೂರ್ ಮತ್ತಿತರರ ಹೆಸರಿತ್ತು. ಆ ಪಟ್ಟಿಯಲ್ಲಿದ್ದ ಏಕೈಕ ಮಹಿಳೆ ಕೂಡ ಮಂಜುಳಾ ಆಗಿದ್ದರು. ಆದರೆ ನ್ಯಾ ಜೆ.ಎಸ್. ಖೇಹರ್ ಅವರು ಮುಖ್ಯ ನ್ಯಾಯಮೂರ್ತಿಯಾದ ಬಳಿಕ ಸರ್ಕಾರಕ್ಕೆ ಕಳುಹಿಸಲಾದ ಅಂತಿಮ ಪಟ್ಟಿಯಲ್ಲಿ ಚೆಲ್ಲೂರ್ ಹೆಸರನ್ನು ಕೈಬಿಡಲಾಗಿದೆ.
ಈ ಬಗ್ಗೆ ಕೊಲಿಜಿಯಂನ ಸದಸ್ಯರಾಗಿರುವ ನ್ಯಾ ಚೆಲಮೇಶ್ವರ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಚೆಲ್ಲೂರ್ ಹೆಸರು ಕೈಬಿಟ್ಟಿದ್ದಕ್ಕೆ ಕಾರಣ ದಾಖಲಿಸಬೇಕು ಎಂದು ಹೇಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಆಂಗ್ಲದೈನಿಕವೊಂದು ವರದಿ ಮಾಡಿದೆ.
