ವಿವಿಧ ಕ್ಷೇತ್ರಗಳಿಂದ ಬಂದಿರುವ ಈ ನಾಲ್ವರ ಕೈಯಲ್ಲಿ ಬಿಸಿಸಿಐ ಆಡಳಿತ ನಡೆಯಲಿದೆ.
ನವದೆಹಲಿ(ಜ. 30): ಮಾಜಿ ಮಹಾಲೇಖಪಾಲ ವಿನೋದ್ ರಾಯ್ ನೇತೃತ್ವದಲ್ಲಿ ನಾಲ್ಕು ಸದಸ್ಯರ ಸಮಿತಿಯು ಬಿಸಿಸಿಐನ ಆಡಳಿತ ಚುಕ್ಕಾಣಿ ಹಿಡಿಯಲಿದೆ. ವಿನೋದ್ ರಾಯ್, ರಾಮಚಂದ್ರ ಗುಹಾ, ವಿಕ್ರಮ್ ಲಿಮಾಯೆ ಮತ್ತು ಡಯಾನಾ ಎಡುಲ್'ಜೀ ಅವರಿರುವ ಸಮಿತಿಯನ್ನು ಸುಪ್ರೀಂಕೋರ್ಟ್ ರಚಿಸಿ ಆದೇಶ ಹೊರಡಿಸಿದೆ. ವಿವಿಧ ಕ್ಷೇತ್ರಗಳಿಂದ ಬಂದಿರುವ ಈ ನಾಲ್ವರ ಕೈಯಲ್ಲಿ ಬಿಸಿಸಿಐ ಆಡಳಿತ ನಡೆಯಲಿದೆ. ಅಮಿಕಸ್ ಕ್ಯೂರೀ(ತಟಸ್ಥ ಸಲಹೆಗಾರರು)ಗಳಾದ ಗೋಪಾಲ್ ಸುಬ್ರಮಣಿಯಮ್ ಮತ್ತು ಅನಿಲ್ ದಿವಾನ್ ಅವರು ಬಿಸಿಸಿಐ ಆಡಳಿತಗಾರರಾಗಿ ನೇಮಿಸಬೇಕೆಂದು ಸಲಹೆ ನೀಡಲಾಗಿದ್ದ 9 ಹೆಸರನ್ನು ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿ ಈ ಆದೇಶ ಹೊರಡಿಸಿದೆ.
ಯಾರು ಈ ನಾಲ್ವರು?
1) ವಿನೋದ್ ರಾಯ್: ಮಾಜಿ ಮಹಾಲೇಖಪಾಲ
2) ರಾಮಚಂದ್ರ ಗುಹಾ: ಖ್ಯಾತ ಇತಿಹಾಸಕಾರ ಮತ್ತು ಅಂಕಣಕಾರ
3) ವಿಕ್ರಮ್ ಲಿಮಾಯೆ: ಇನ್'ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಫೈನಾನ್ಸ್ ಕಂಪನಿಯ ನಿರ್ವಾಹಕ ನಿರ್ದೇಶಕರು
4) ಡಯಾನಾ ಎಡುಲ್ಜೀ: ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ್ತಿ
ಈ ಸಮಿತಿಯನ್ನಷ್ಟೇ ಅಲ್ಲ, ಮೂವರು ಸದಸ್ಯರ ಆಯೋಗವೊಂದನ್ನೂ ಸುಪ್ರೀಂಕೋರ್ಟ್ ರಚಿಸಿದೆ. ಬಿಸಿಸಿಐನ ಜಂಟಿ ಕಾರ್ಯದರ್ಶಿ ಅಮಿತಾಭ್ ಚೌಧರಿ, ಖಜಾಂಚಿ ಅನಿರುದ್ಧ್ ಚೌಧರಿ ಮತ್ತು ವಿಕ್ರಮ್ ಲಿಮಯೆ ಅವರು ಈ ಆಯೋಗದಲ್ಲಿರುತ್ತಾರೆ. ಫೆ.2ರಿಂದ ಮೂರು ದಿನಗಳ ಕಾಲ ನಡೆಯಲಿರುವ ಐಸಿಸಿ ಸಭೆಯಲ್ಲಿ ಬಿಸಿಸಿಐಯನ್ನು ಈ ಆಯೋಗವು ಪ್ರತಿನಿಧಿಸಲಿದೆ.
