ನವದೆಹಲಿ(ಜು.26): ಬಡ್ತಿಯಲ್ಲಿ ಮೀಸಲಾತಿಯನ್ನು ಎತ್ತಿ ಹಿಡಿದಿದ್ದ ಸುಪ್ರೀಂಕೋರ್ಟ್ ತೀರ್ಪಿನ ಪರಾಮರ್ಶೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸರ್ವೋಚ್ಛ ನ್ಯಾಯಾಲಯ ಕೈಗೆತ್ತಿಕೊಂಡಿದೆ.

ನ್ಯಾ. ಯು.ಯು ಲಲಿತ್ ನೇತೃತ್ವದ ನ್ಯಾಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದ ಅರ್ಜಿಯನ್ನು ಪರಿಶೀಲಿಸಿದ ನ್ಯಾಯಪೀಠ, ವಿಚಾರಣೆಗೆ ಅಸ್ತು ಎಂದಿದೆ.

ಇನ್ನು ವಾರಾಂತ್ಯ ಇರುವುದರಿಂದ ಸೋಮವಾರ ಅರ್ಜಿಯ ವಿಚಾರಣೆ ನಡೆಯಲಿದ್ದು, ನ್ಯಾ. ಲಲಿತ್ ಮತ್ತು ನ್ಯಾ. ಚಂದ್ರಚೂಡ್ ನ್ಯಾಯಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವ ಸಂಬಂಧ, ರಾಜ್ಯ ಸರ್ಕಾರ ಕಳೆದ ವರ್ಷ ಜಾರಿಗೆ ತಂದಿದ್ದ ವಿವಾದಾತ್ಮಕ ಕಾಯ್ದೆಯನ್ನು ಸುಪ್ರೀಂ ಕೋರ್ಟ್‌ ಕಳೆದ ಮೇನಲ್ಲಿ ಮಾನ್ಯಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.