ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್‌ನ ಅನುಮತಿ ಪಡೆದು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು ಎಂದು ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ತಿಳಿಸಿದ್ದಾರೆ.

ಬೆಂಗಳೂರು: ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡುವ ಪ್ರಕ್ರಿಯೆಯನ್ನು ಸುಪ್ರೀಂಕೋರ್ಟ್‌ನ ಅನುಮತಿ ಪಡೆದು ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಲಾಗುವುದು ಎಂದು ಕೇಂದ್ರದ ಮುಖ್ಯ ಚುನಾವಣಾ ಆಯುಕ್ತ ಓಂ ಪ್ರಕಾಶ್‌ ರಾವತ್‌ ತಿಳಿಸಿದ್ದಾರೆ.

ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾಮ್ಸ್‌ರ್‍ (ಎಡಿಆರ್‌) ಮತ್ತು ಕರ್ನಾಟಕ ಎಲೆಕ್ಷನ್‌ ವಾಚ್‌( ಕೆಇಡಬ್ಲ್ಯೂ) ಜಂಟಿಯಾಗಿ ನಗರದ ಐಐಎಂಬಿನಲ್ಲಿ ಶನಿವಾರ ಆಯೋಜಿಸಿದ ಚುನಾವಣೆ ಮತ್ತು ರಾಜಕೀಯ ಸುಧಾರಣೆ ಕುರಿತ 14ನೇ ರಾಷ್ಟ್ರೀಯ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಚುನಾವಣಾ ಆಯೋಗವು ಈಗಾಗಲೇ 85.50 ಕೋಟಿ ನೋಂದಣಿಯಾಗಿರುವ ಮತದಾರರ ಗುರುತಿನ ಚೀಟಿ ಪೈಕಿ 32 ಕೋಟಿ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡಿದೆ. ಇನ್ನು 54.5 ಕೋಟಿ ಮತದಾರರ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡಬೇಕಿದೆ. ಸುಪ್ರೀಂಕೋರ್ಟ್‌ನಲ್ಲಿ ತಡೆ ಇರುವ ಕಾರಣ ತಾತ್ಕಾಲಿಕವಾಗಿ ಜೋಡಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದರು.

ಸೋಮವಾರ ಈ ವಿಷಯ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದೂ ಅವರು ನುಡಿದರು.

ನ್ಯಾಯಾಲಯದ ಅನುಮತಿ ಪಡೆಯುವ ಪ್ರಯತ್ನ ನಡೆಸಲಾಗುವುದು. ಶೀಘ್ರದಲ್ಲಿಯೇ ಮತ್ತೊಮ್ಮೆ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು. ಕರ್ನಾಟಕ ಮೂಲದ ಮ್ಯಾಥ್ಯೂ ಥಾಮಸ್‌ ಎಂಬುವವರು ಆಧಾರ್‌ ಜೋಡಣೆಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಾಲಯದ ಮೆಟ್ಟಿಲೇರಿರುವ ಹಿನ್ನೆಲೆಯಲ್ಲಿ ಜೋಡಣೆ ಮಾಡಲು ಆಯೋಗಕ್ಕೆ ಹಿನ್ನಡೆಯಾಗಿದೆ. ಮತದಾರರ ಗುರುತಿನ ಚೀಟಿಯನ್ನು ಆಧಾರ್‌ ಜೋಡಣೆ ಮಾಡುವ ಬಗ್ಗೆ ನ್ಯಾಯಾಲಯದ ಗಮನಕ್ಕೆ ತಂದು ತಡೆಯನ್ನು ತೆರವುಗೊಳಿಸಿ ಜೋಡಣೆ ಕಾರ್ಯ ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.

ಮತದಾರರ ಜೋಡಣೆ ಪ್ರಕ್ರಿಯೆಗೆ ಹೆಚ್ಚಿನ ಸಮಯ ಬೇಕಾಗಿಲ್ಲ. ಕೇವಲ ಮೂರು ತಿಂಗಳಲ್ಲಿ 32 ಕೋಟಿ ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡಲಾಗಿದೆ. ಮೂರು ತಿಂಗಳಲ್ಲಿ ಅಷ್ಟೊಂದು ಜೋಡಣೆ ಮಾಡಿರುವಾಗ ಇನ್ನುಳಿದ 54.5 ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮಾಡಲು ಹೆಚ್ಚಿನ ಕಾಲಾವಕಾಶ ಬೇಕಾಗಿಲ್ಲ. ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದೇವೆ. ಒಮ್ಮೆ ಅನುಮತಿ ಸಿಕ್ಕರೆ ಕೆಲವೇ ತಿಂಗಳಲ್ಲಿ ಜೋಡಣೆ ಕಾರ್ಯವನ್ನು ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದರು.

ಮತಯಂತ್ರಗಳ ದುರ್ಬಳಕೆ ಕುರಿತು ಆರೋಪಗಳು ಸಾಕಷ್ಟುಬಂದಿವೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ರಾಷ್ಟ್ರದಲ್ಲಿ ಯಾವುದೇ ಸುಧಾರಣೆಗಳಾಗಬೇಕಾದರೆ ಕಾಯ್ದೆಯಲ್ಲಿ ತಿದ್ದುಪಡಿ ತರಬೇಕಾದ ಅಗತ್ಯ ಇದೆ. ಕಾಲಕ್ಕೆ ತಕ್ಕಂತೆ ಕಾಯ್ದೆಗಳನ್ನು ತಿದ್ದುಪಡಿ ಮಾಡಿದರೆ ಮಾತ್ರ ಜಟಿಲವಾಗಿರುವ ವ್ಯವಸ್ಥೆ ಸುಧಾರಣೆಯಾಗಲು ಸಾಧ್ಯ. ಯಾವುದೇ ವ್ಯವಸ್ಥೆ ಸುಧಾರಣೆಯಾಗಲು ಸಾರ್ವಜನಿಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ಇದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಚುನಾವಣೆ ವೆಚ್ಚಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಓಂ ಪ್ರಕಾಶ್‌ ರಾವತ್‌, ಚುನಾವಣಾ ಕಣಕ್ಕಿಳಿಯುವ ಅಭ್ಯರ್ಥಿಯು ವೆಚ್ಚ ಮಾಡುವುದಕ್ಕೆ ನಿಗದಿ ಮಾಡಲು ಆಯೋಗಕ್ಕೆ ಅವಕಾಶ ಇದೆ. ಆದರೆ, ರಾಜಕೀಯ ಪಕ್ಷಗಳ ವೆಚ್ಚವನ್ನು ನಿಗದಿ ಮಾಡಲು ಅವಕಾಶ ಇಲ್ಲ ಎಂದು ಇದೇ ವೇಳೆ ತಿಳಿಸಿದರು. ಕಾರ್ಯಕ್ರಮದಲ್ಲಿ ಕೆಇಡಬ್ಲ್ಯೂ ಸಂಯೋಜಕ ಹರೀಶ್‌ ನರಸಪ್ಪ, ಎಡಿಆರ್‌ ಸಂಸ್ಥಾಪಕ ಸದಸ್ಯಡಾ.ಅಜಿತ್‌ ರಾನಡೆ, ಟ್ರಸ್ಟಿತ್ರಿಲೋಚನ್‌ ಶಾಸ್ತ್ರೀ ಇತರರು ಉಪಸ್ಥಿತರಿದ್ದರು.