ಗಮನಿಸಬೇಕಾದ ವಿಚಾರವೆಂದರೆ, ಬ್ಯಾಂಕಿನೊಳಗೆ ನೀವು ನಡೆಸುವ ಯಾವುದೇ ಚೆಕ್ ವಹಿವಾಟಿಗೆ ಯಾವುದೇ ರೀತಿಯ ದಂಡ ವಿಧಿಸಲಾಗುವುದಿಲ್ಲ. ಡ್ರಾಪ್ ಬಾಕ್ಸ್'ಗೆ ಹಾಕಲಾಗುವ ಚೆಕ್'ಗಳಿಗೆ ಮಾತ್ರ ಹೊಸ ನಿಯಮ ಜಾರಿಗೆ ಬರುತ್ತದೆ.

ಮುಂಬೈ(ಏ. 18): ಚೆಕ್'ಗೂ ಶುಲ್ಕ ಪಾವತಿಸಬೇಕಾದ ಕಾಲ ಬಂದಿದೆ. ಎಸ್'ಬಿಐ ಗ್ರಾಹಕರೇ, ನೀವು ಚೆಕ್ ಡ್ರಾಪ್ ಬಾಕ್ಸ್'ಗೆ ಚೆಕ್ ಹಾಕುವ ಮುನ್ನ ಸ್ವಲ್ಪ ಯೋಚಿಸಿ. ಯಾಕೆಂದರೆ 2 ಸಾವಿರಕ್ಕಿಂತ ಕಡಿಮೆ ಮೌಲ್ಯದ ಚೆಕನ್ನು ನೀವು ಡ್ರಾಪ್ ಬಾಕ್ಸ್'ಗೆ ಹಾಕಿದ್ದೇ ಆದಲ್ಲಿ 100 ರೂ. ದಂಡ ತೆರಬೇಕಾಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಂಗ ಸಂಸ್ಥೆಯಾದ "ಎಸ್'ಬಿಐ ಕಾರ್ಡ್" ಈ ನಿರ್ಧಾರ ಕೈಗೊಂಡಿದೆ. ಅಂದಹಾಗೆ, ಇದು ಚೆಕ್ ಡ್ರಾಪ್ ಬಾಕ್ಸ್'ಗೆ ಹಾಕಲಾಗುವ ಚೆಕ್'ಗಳಿಗೆ ಮಾತ್ರ ಸೀಮಿತ.

ಏನಿದು ಎಸ್'ಬಿಐ ಕಾರ್ಡ್?
ಎಸ್'ಬಿಐ ಕಾರ್ಡ್ ಎಂಬುದು ಎಸ್'ಬಿಐನ ಅಂಗ ಸಂಸ್ಥೆ. ಹಣಕಾಸು ಸಂಸ್ಥೆ ಎಂದು ರಿಜಿಸ್ಟರ್ ಆಗಿರುವ ಇದು ಬ್ಯಾಂಕ್ ಸಂಸ್ಥೆ ಅಲ್ಲ. ಎಸ್'ಬಿಐನ ಚೆಕ್'ಡ್ರಾಪ್ ಬಾಕ್ಸ್'ಗಳಲ್ಲಿನ ಚೆಕ್'ಗಳನ್ನು ವಿಲೇವಾರಿ ಮಾಡುವ ಹೊಣೆ ಈ "ಎಸ್'ಬಿಐ ಕಾರ್ಡ್" ಸಂಸ್ಥೆಯದ್ದಾಗಿದೆ. ಇಂತಹ ವಿಲೇವಾರಿ ಕಾರ್ಯದಲ್ಲಿ ಸಂಸ್ಥೆಗೆ ಸಾಕಷ್ಟು ಖರ್ಚು ತಗುಲುತ್ತಿದೆ ಎಂದು ಎಸ್'ಬಿಐ ಕಾರ್ಡ್ ಸಂಸ್ಥೆಯ ಸಿಇಒ ವಿಜಯ್ ಜಸೂಜಾ ಹೇಳುತ್ತಾರೆ. "ಡ್ರಾಪ್ ಬಾಕ್ಸ್'ಗಳಲ್ಲಿ ಸಾಕಷ್ಟು ತಡವಾಗಿ ಚೆಕ್'ಗಳನ್ನು ಹಾಕಲಾಗುತ್ತಿದೆ. ಹೀಗಾಗಿ, ಲೇಟ್ ಪೇಮೆಂಟ್ ಚಾರ್ಜ್ ಹಾಕಬೇಕಾಗುತ್ತದೆ. ಆದರೆ, ಇದರ ವಿರುದ್ಧ ಗ್ರಾಹಕರು ಕಾನೂನಿನ ಮೊರೆ ಹೋಗುತ್ತಿದ್ದಾರೆ. ತಮ್ಮ ತಪ್ಪಿಲ್ಲದಿದ್ದರೂ ಬ್ಯಾಂಕ್ ತಪ್ಪಿತಸ್ಥವಾಗಬೇಕಾದ ಪರಿಸ್ಥಿತಿ ಬಂದಿದೆ," ಎಂದು ಎಸ್'ಬಿಐ ಕಾರ್ಡ್ ಸಂಸ್ಥೆ ಹೇಳುತ್ತದೆ.

ಇಂತಹ ರಗಳೆಗಳಿಂದ ಮುಕ್ತವಾಗಲು ಎಸ್'ಬಿಐ ಸಂಸ್ಥೆಯು ಚೆಕ್ ಪೇಮೆಂಟನ್ನೇ ನಿಲ್ಲಿಸುವತ್ತ ಇದು ಮೊದಲ ಹೆಜ್ಜೆಯಾಗಿರಬಹುದು. "ದೇಶದಲ್ಲಿ ಡಿಜಿಟಲ್ ಪೇಮೆಂಟ್'ಗೆ ಹಲವು ಅವಕಾಶಗಳಿರುವಾಗ ಜನರು ಯಾಕೆ ಈಗಲೂ ಚೆಕ್ ಹಾಕಬೇಕು?" ಎಂದು ವಿಜಯ್ ಜಸೂಜಾ ಪ್ರಶ್ನಿಸುತ್ತಾರೆ. ಇವರ ಪ್ರಕಾರ, ತಮ್ಮ ಹಣ ವಹಿವಾಟ ಮಾಡಲು ಶೇ.8ರಷ್ಟು ಜನರು ಮಾತ್ರ ಚೆಕ್ ಬಳಸುತ್ತಾರೆ. ಶೇ.6ರಷ್ಟು ಜನರು 2 ಸಾವಿರಕ್ಕಿಂತ ಹೆಚ್ಚು ಮೌಲ್ಯದ ಚೆಕ್ ನೀಡುತ್ತಾರೆ. ಇನ್ನುಳಿದ 2% ಮಂದಿ ಮಾತ್ರ 2 ಸಾವಿರಕ್ಕಿಂತ ಕಡಿಮೆ ಮೌಲ್ಯದ ಚೆಕ್ ಹಾಕುತ್ತಾರಂತೆ. ಇವರು ಮಾತ್ರ 100 ರೂಪಾಯಿ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.

ಗಮನಿಸಬೇಕಾದ ವಿಚಾರವೆಂದರೆ, ಬ್ಯಾಂಕಿನೊಳಗೆ ನೀವು ನಡೆಸುವ ಯಾವುದೇ ಚೆಕ್ ವಹಿವಾಟಿಗೆ ಯಾವುದೇ ರೀತಿಯ ದಂಡ ವಿಧಿಸಲಾಗುವುದಿಲ್ಲ. ಡ್ರಾಪ್ ಬಾಕ್ಸ್'ಗೆ ಹಾಕಲಾಗುವ ಚೆಕ್'ಗಳಿಗೆ ಮಾತ್ರ ಹೊಸ ನಿಯಮ ಜಾರಿಗೆ ಬರುತ್ತದೆ.