ಕತಾರ್ ಏರ್‌'ವೇಸ್‌'ನಲ್ಲಿ ಪ್ರಯಾಣದ ದೂರಕ್ಕೆ ಅನುಗುಣವಾಗಿ ಪ್ರತಿ ಪಕ್ಷಿಗೆ 90 ಪೌಂಡ್‌ನಿಂದ 500 ಪೌಂಡ್‌'ವರೆಗೆ ಸಾಗಣೆ ವೆಚ್ಚವಿದೆ.

ರಿಯಾದ್(ಜ.31): ಬರೋಬ್ಬರಿ 80 ಗಿಡುಗಗಳನ್ನು ವಿಮಾನದಲ್ಲಿ ಕೊಂಡೊಯ್ಯುವ ಮೂಲಕ ಸೌದಿ ದೊರೆಯು ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದ್ದಾರೆ.

ಕತಾರ್ ಏರ್‌'ವೇಸ್ ವಿಮಾನದಲ್ಲಿ ಸೌದಿ ದೊರೆ 80 ಗಿಡುಗಗಳ ರೆಕ್ಕೆಗಳನ್ನು ಕಟ್ಟಿ ಕೊಂಡೊಯ್ಯುತ್ತಿರುವ ಚಿತ್ರವನ್ನು ‘ಲೆನ್ಸೂ’ ಎಂಬುವವರು ರೆಡ್‌'ಇಟ್‌'ನಲ್ಲಿ ಅಪ್‌'ಲೋಡ್ ಮಾಡಿದ್ದು, ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಮಧ್ಯಪ್ರಾಚ್ಯ ದೇಶಗಳಲ್ಲಿ ಗಿಡುಗಗಳ ಸಾಗಣೆಯು ಸಾಮಾನ್ಯವಾಗಿದ್ದು, ಸ್ವತಃ ಕತಾರ್ ಹಾಗೂ ಎತಿಹಾದ್ ವಿಮಾನಯಾನ ಸಂಸ್ಥೆಯೇ ಎಕಾನಮಿ ದರ್ಜೆಯಲ್ಲಿ ಪಕ್ಷಿಗಳ ಸಾಗಣೆಗೆ ಅವಕಾಶ ಕಲ್ಪಿಸಿದೆ ಎಂದು ಹಲವರು ವಾದಿಸಿದ್ದಾರೆ. ಕತಾರ್ ಏರ್‌'ವೇಸ್‌'ನಲ್ಲಿ ಪ್ರಯಾಣದ ದೂರಕ್ಕೆ ಅನುಗುಣವಾಗಿ ಪ್ರತಿ ಪಕ್ಷಿಗೆ 90 ಪೌಂಡ್‌ನಿಂದ 500 ಪೌಂಡ್‌'ವರೆಗೆ ಸಾಗಣೆ ವೆಚ್ಚವಿದೆ. ಅವಘಡದಿಂದ ತಪ್ಪಿಸಲು ಅವುಗಳಿಗೂ ಸೀಟು ಕಾಯ್ದಿರಿಸಿ, ಬಟ್ಟೆಗಳ ಮೇಲೆ ಕೂರಿಸಲಾಗುತ್ತದೆ. ಗಿಡುಗಗಳು ಸಂಯುಕ್ತ ಅರಬ್ ಒಕ್ಕೂಟದ ಸಂಕೇತವಾಗಿದೆ.

ಎತಿಹಾದ್, ಎಮಿರೇಟ್ಸ್ ಅಥವಾ ಕತಾರ್ ವಿಮಾನಗಳಲ್ಲಿ ಸಂಚರಿಸಿದರೆ, ಅಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ಪ್ರಯಾಣಿಸುವ ವ್ಯಕ್ತಿಯ ಪಕ್ಕದ ಸೀಟಿನಲ್ಲಿ ಗಿಡುಗ ಕುಳಿತಿರುವುದನ್ನು ಕಾಣಬಹುದು ಎಂದು ಇನ್ನು ಕೆಲವರು ವ್ಯಂಗ್ಯವಾಡಿದ್ದಾರೆ.