ಭಾರತಕ್ಕೆ ಆಗಮಿಸಿದ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್| ರಾಜಕುಮಾರನಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಭಾರತಕ್ಕೆ ಮೊದಲ ಭೇಟಿ| ಪ್ರಧಾನಿ ನರೇಂದ್ರ ಮೋದಿ ಜೊತೆ ದ್ವಿಪಕ್ಷೀಯ ಮಾತುಕತೆ| ಉಭಯ ನಾಯಕರಿಂದ ಭಯೋತ್ಪಾದನೆ ವಿರುದ್ಧ ಜಂಟಿ ಹೋರಾಟದ ಭರವಸೆ|
ನವದೆಹಲಿ(ಫೆ.20): ಭಾರತ ಪ್ರವಾಸದಲ್ಲಿರುವ ಸೌದಿ ರಾಜಕುಮಾರ ಮಹಮ್ಮದ್ ಬಿನ್ ಸಲ್ಮಾನ್ ಅವರನ್ನು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವೆ ಸ್ವರಾಜ್ ಅವರು ಸ್ವಾಗತಿಸಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ.
ದ್ವಿಪಕ್ಷೀಯ ಮಾತುಕತೆ ವೇಳೆ ಉಭಯ ದೇಶಗಳ ನಾಯಕರು ಒಪ್ಪಂದಗಳ ವಿನಿಮಯ ಹಾಗೂ ಜಂಟಿ ಪತ್ರಿಕಾ ಹೇಳಿಕೆ ನೀಡಿದರು. ವ್ಯಾಪಾರ, ಹೂಡಿಕೆ ರಕ್ಷಣೆ ಹಾಗೂ ಪ್ರಾದೇಶಿಕ ಸಹಕಾರದ ಕುರಿತು ಪರಸ್ಪರ ಮಾತುಕತೆ ನಡೆದಿದೆ.
ಇದೇ ವೇಳೆ ಭಯೋತ್ಪಾದನೆ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಮ್ಮದ್ ಬಿನ್ ಸಲ್ಮಾನ್, ಈ ಜಾಗತಿಕ ಪಿಡುಗಿನ ವಿರುದ್ಧ ಉಭಯ ದೇಶಗಳೂ ಒಟ್ಟಾಗಿ ಹೋರಾಡಲಿವೆ ಎಂದು ಹೇಳಿದ್ದಾರೆ.
ಭಾರತ ಹಾಗೂ ಸೌದಿ ಅರೆಬಿಯಾ ನಡುವಣ ಗಟ್ಟಿ ಬಾಂಧವ್ಯ ನಮ್ಮ ಡಿಎನ್ಎ ನಲ್ಲಿಯೇ ಅಡಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿಕೆಯನ್ನು ಸೌದಿ ದೊರೆ ಅನುಮೋದಿಸಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ಸಾಂಪ್ರದಾಯಿಕ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಸೌದಿ ರಾಜಕುಮಾರ, ಎರಡು ದೇಶಗಳ ನಡುವೆ ಪುರಾತನ ಕಾಲದಿಂದಲೂ ಬಾಂಧವ್ಯವಿದೆ. ಉಭಯ ದೇಶಗಳ ಹಿತದೃಷ್ಟಿಯಿಂದ ಈ ಬಾಂಧವ್ಯವನ್ನು ಕಾಪಾಡಿಕೊಂಡು ಅದನ್ನು ಮತ್ತಷ್ಟು ಬಲಗೊಳಿಸಬೇಕಾಗಿದೆ ಎಂದು ಹೇಳಿದರು.
