ಇತ್ತೀಚೆಗೆ ಸೌದಿಯ ಉತ್ತರಾಧಿಕಾರಿ ಪಟ್ಟವನ್ನು ಕಳೆದುಕೊಂಡ ಮುಹಮ್ಮದ್ ಬಿನ್ ನಾಯೆಫ್ ಅವರನ್ನು ಅರಮನೆ ಬಂಧನದಲ್ಲಿಡಲಾಗಿದೆಯೆಂದು ಅಮೆರಿಕಾ ಮಾಧ್ಯಮಗಳು ವರದಿ ಮಾಡಿವೆ. ನಾಯೆಫ್ ಅವರ ವಿದೇಶ ಪ್ರವಾಸಗಳಿಗೆ ನಿರ್ಬಂಧ ಹೇರಲಾಗಿದೆಯೆಂದು ವರದಿಗಳು ಹೇಳಿವೆ, ಆದರೆ ಸೌದಿ ಅಧಿಕಾರಿಗಳು ವರದಿಗಳನ್ನು ನಿರಾಕರಿಸಿದ್ದಾರೆ.

ಸೌದಿ ಅರೇಬಿಯಾದ ಪ್ರಮುಖ ಇಲಾಖೆಗಳ ಉಸ್ತುವಾರಿ ಹೊಂದಿದ್ದ ಹಾಗೂ ಪ್ರಭಾವಶಾಲಿ ನಾಯಕನಾಗಿದ್ದ ನಾಯೆಫ್ ಅವರನ್ನು ಉತ್ತರಾಧಿಕಾರಿ ಪಟ್ಟದಿಂದ ಕೆಳಗಿಳಿಸಿ ದೊರೆ ಸಲ್ಮಾನ್ ಕಳೆದ ವಾರ ಏಕಾಏಕಿ ತನ್ನ ಪುತ್ರ ಮುಹಮ್ಮದ್ ಬಿನ್ ಸಲ್ಮಾನ್ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಿದ್ದರು.

ಜಿದ್ದಾದಲ್ಲಿರುವ ತನ್ನ ಅರಮನೆಯಿಂದ ಹೊರಬರದಂತೆ ನಾಯೆಫ್ ಅವರನ್ನು ನಿರ್ಬಂಧಿಸಲಾಗಿದೆಯೆಂದು ನ್ಯೂಯಾರ್ಕ್ ಟೈಮ್ಸ್ ಹೇಳಿದ್ದರೆ, ಹೊಸ ಉತ್ತರಾಧಿಕಾರಿ ನೇಮಕಕ್ಕೆ ಯಾವುದೇ ವಿರೋಧ ಉಂಟಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ಈ ರೀತಿ ಮಾಡಲಾಗಿದೆಯೆಂದು ದಿ ಟೈಮ್ಸ್ ಹೇಳಿದೆ.

ನಾಯೆಫ್ ಅರಮನೆಯಲ್ಲಿದ್ದ ನಂಬಿಕಸ್ಥ ರಕ್ಷಣಾ ಸಿಬ್ಬಂದಿಗಳ ಬದಲಿಗೆ ದೊರೆ ಸಲ್ಮಾನ್’ಗೆ ನಿಷ್ಠರಾಗಿರುವ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.

ಆದರೆ ಈ ಎಲ್ಲಾ ವರದಿಗಳನ್ನು ಸೌದಿಯ ವಿದೇಶಾಂಗ ಇಲಾಖೆ ನಿರಾಕರಿಸಿದೆ. ಮಾಧ್ಯಮ ವರದಿಗಳನ್ನು ಆಧಾರರಹಿತ ಹಾಗೂ ಸುಳ್ಳು ಎಂದು ಅದು ಹೇಳಿದೆ.