ಚಂಡೀಗಢ[ಏ.18]: ತಮ್ಮದೇ ದೇಶದ ಪ್ರಜೆಯೊಬ್ಬನನ್ನು ಹತ್ಯೆ ಮಾಡಿದ್ದ ಪಂಜಾಬ್‌ ಮೂಲದ ಇಬ್ಬರಿಗೆ ಸೌದಿ ಅರೇಬಿಯಾದಲ್ಲಿ ಶಿರಚ್ಛೇದನದ ಶಿಕ್ಷೆ ವಿಧಿಸಲಾಗಿದೆ. ಫೆ. 28ರಂದೇ ಪಂಜಾಬ್‌ ಮೂಲದ ಸತ್ವಿಂದರ್‌ ಸಿಂಗ್‌ ಮತ್ತು ಹರ್ಜಿತ್‌ಸಿಂಗ್‌ರನ್ನು ಶಿರಚ್ಛೇದ ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಶಿರಚ್ಛೇದಕ್ಕೂ ಮುನ್ನ ಸೌದಿ ಅರೇಬಿದಲ್ಲಿನ ಭಾರತೀಯ ರಾಯಭಾರ ಕಚೇರಿಗೂ ಈ ಮಾಹಿತಿ ತಿಳಿಸಲಾಗಿಲ್ಲ. ಸೌದಿ ನಿಯಮಗಳ ಅನ್ವಯ ಶವವನ್ನು ಕುಟುಂಬ ಸದಸ್ಯರಿಗೆ ಕೂಡಾ ನೀಡಲಾಗುವುದಿಲ್ಲ. ಕಳ್ಳತನ ಮಾಡಿದ ಹಣ ಹಂಚಿಕೆ ವಿಷಯದಲ್ಲಿ ಸತ್ವಿಂದರ್‌, ಹರ್ಜಿತ್‌ ಮತ್ತು ಆರೀಫ್‌ ನಡುವೆ ಗದ್ದಲ ಉಂಟಾಗಿ, ಕೊನೆಗೆ ಆರಿಫ್‌ನನ್ನು ಹತ್ಯೆಗೈಯಲಾಗಿತ್ತು.

ಈ ಘಟನೆಯನ್ನು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅತ್ಯಂತ ಕಠಿಣ ಶಬ್ದಗಳಿಂದ ಖಂಡಿಸಿದ್ದು, ಇದೊಂದು ಬರ್ಬರ ಕೃತ್ಯ ಎಂದಿದ್ದಾರೆ. ಭಾರತೀಯ ರಾಯಭಾರ ಕಚೇರಿಗೆ ಪ್ರಾಥಮಿಕ ಮಾಹಿತಿಯನ್ನೂ ನೀಡದೇ, ಆರೋಪಿಗಳಿಗೆ ಕಾನೂನು ಹೋರಾಟಕ್ಕೂ ಅವಕಾಶ ನೀಡದೇ ಶಿರಚ್ಛೇದ ಮಾಡಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.