ಭಾರತೀಯ ಮೂಲದ ಯೋಗಾಸನವನ್ನು 2015ರಲ್ಲಿ ವಿಶ್ವಸಂಸ್ಥೆಯು ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನಾಗಿ ಘೋಷಿಸಿದೆ.
ಸೌದಿ(ನ.15): 'ನನ್ನ ಖಾಯಿಲೆಯೇ ನನಗೆ ಯೋಗದ ಕಡೆ ಒಲವು ಮೂಡುವಂತೆ ಮಾಡಿತು' ಇದು ಸೌದಿ ಅರೇಬಿಯಾದ ರಾಜಧಾನಿಯಲ್ಲಿ ಯೋಗಾಸನದ ಉಪಯೋಗದ ಕುರಿತು ಪ್ರಚಾರ ಮಾಡುತ್ತಿರುವ 37 ವರ್ಷದ ನೌಫ್ ಮರ್ವಾಯಿಯ ಮಾತು. ಕೊನೆಗೂ ನೌಫ್ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಸೌದಿ ಅರೇಬಿಯಾ ಯೋಗಕ್ಕೆ ಸಂಪೂರ್ಣ ಮಾನ್ಯತೆ ನೀಡಿದ್ದು, ಕ್ರೀಡೆಯನ್ನಾಗಿ ಪರಿಗಣಿಸಿ ದೇಶದಲ್ಲಿ ಯೋಗ ಕಲಿಕೆಗೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಯೋಗಾಸನವನ್ನು ಯಾರು ಬೇಕಾದರು ಸೌದಿ ಅರೇಬಿಯಾದಲ್ಲಿ ಮಾಡಬಹುದಾಗಿದೆ. ಈ ಮೂಲಕ ಭಾರತೀಯ ಮೂಲದ ಯೋಗಕ್ಕೆ ಮಾನ್ಯತೆ ನೀಡಿದ ಮೊದಲ ಮುಸ್ಲಿಂ ರಾಷ್ಟ್ರವೆಂಬ ಖ್ಯಾತಿಗೆ ಸೌದಿ ಅರೇಬಿಯಾ ಪಾತ್ರವಾಗಿದೆ. ಈ ಹಿಂದೆ ಜೂನ್ 21 ರಂದು ನಡೆಸಲಾಗುವ ವಿಶ್ವ ಯೋಗದಿನದ ಸಹಭಾಗಿತ್ವವನ್ನು ಸೌದಿ ಅರೇಬಿಯಾ ಪಡೆದಿರಲಿಲ್ಲ. ಆದರೆ ಈಗ ಕೈಗೊಂಡಿರುವ ನಿರ್ಧಾರ ಐತಿಹಾಸಿಕವಾಗಿದ್ದು , ಬದಲಾವಣೆಯ ಸೂಚನೆ ಎನ್ನಲಾಗಿದೆ.
ಇತ್ತೀಚೆಗೆ ಜಾರ್ಖಂಡ್'ನ ರಾಂಚಿಯಲ್ಲಿ ಮುಸ್ಲಿಂ ಯೋಗ ಶಿಕ್ಷಕಿ ರಾಫಿಯಾ ನಾಝ್ ವಿರುದ್ದ ಫತ್ವಾ ಹೊರಡಿಸಿ ಆಕೆಯ ನಿವಾಸದ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು. ಈ ವೇಳೆ ನಾಝ್ ಬೆಂಬಲಕ್ಕೆ ಬಂದಿದ್ದ ಬಾಬಾ ರಾಮ್'ದೇವ್ ಅವರು ಯೋಗವನ್ನು ಧರ್ಮದ ಹೆಸರಿನಲ್ಲಿ ನೋಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು.
ಭಾರತೀಯ ಮೂಲದ ಯೋಗಾಸನವನ್ನು 2015ರಲ್ಲಿ ವಿಶ್ವಸಂಸ್ಥೆಯು ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯನ್ನಾಗಿ ಘೋಷಿಸಿದೆ.
