ಬೆಳಗಾವಿ : ರಾಜ್ಯದಲ್ಲಿ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸುವ ಯತ್ನ ಮಾಡಬೇಕು. ಇದರಿಂದ ಸಮ್ಮಿಶ್ರ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. 

ಡಿಕೆಶಿ ವಿರುದ್ಧದ ಅಸಮಾಧಾನದ ವಿಚಾರ ಪ್ರಸ್ತಾಪಿಸಿದ ಸತೀಶ್ ಜಾರಕಿಹೊಳಿ, ಕುಂದಗೋಳ ಉಸ್ತುವಾರಿ ಕೊಡಬೇಡಿ ಎಂದು ಹೇಳಿಲ್ಲ. ಯಾರು ಉಸ್ತುವಾರಿ ವಹಿಸಿಕೊಂಡರು ಪಕ್ಷದ ಗೆಲುವು ಮುಖ್ಯ ಎಂದರು. 

 ಇನ್ನು ಮೇ 23ರ ಬಳಿಕ ಸಚಿವರೆಲ್ಲ ಮಾಜಿ ಆಗಲಿದ್ದಾರೆ ಎನ್ನುವ ರಮೇಶ ಜಾರಕಿಹೊಳಿ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ತಾವು ಎಂದಿಗೂ ಕೂಡ  ಸಚಿವ ಸ್ಥಾನದ ದುರುಪಯೋಗ ‌ಮಾಡಿಲ್ಲ. ಸಚಿವರ ಕಾರಿಗೆ ಕೆಂಪು ಲೈಟು ತೆಗೆದು ಬಹಳ ದಿನ ಆಗಿದೆ. ಅವನಿಗೆ ಕೆಂಪು ಲೈಟು, ಅಧಿಕಾರದ ಬಗ್ಗೆ ಗೊತ್ತಿಲ್ಲ ಎಂದು ಸಹೋದರನ ವಿರುದ್ಧ ಅಸಮಾಧಾನ ಹೊರಹಾಕಿದರು. 

ಇನ್ನು  ರಮೇಶ ಜಾರಕಿಹೊಳಿ ರಾಜೀನಾಮೆ ಕೊಟ್ಟರೆ ಗೋಕಾಕ್ ಉಪಚುನಾವಣೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. 

ಲೋಕಸಭಾ ಚುನಾವಣೆ ಫಲಿತಾಂಶ ಮೇ 23 ರಂದು ಪ್ರಕಟವಾಗಲಿದ್ದು, ಕೇಂದ್ರದಲ್ಲಿ ಬಿಜೆಪಿಗೆ ಬಹುಮತ ಬಂದರೆ ರಾಜ್ಯದಲ್ಲಿ ಆಪರೇಷನ್ ಕಮಲ ಆಗುತ್ತದೆ. ಕಡಿಮೆ ಸ್ಥಾನ ಬಂದರೆ ಇದು ಸಾಧ್ಯವಿಲ್ಲ. ದೇಶದ ಎಲ್ಲಾ ಕಡೆಯೂ ಕೂಡ ಆಪರೇಷನ್ ಕಮಲ ಮಾಡುತ್ತಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಬೆಳವಣಿಗೆ ಎಂದರು.