14 ಪ್ರಮುಖ ಶಿಫಾರಸಿರುವ ಪರಿಷ್ಕೃತ ವರದಿ ಸಲ್ಲಿಕೆ | ಐಟಿ ಬಿಟಿ ಸೇರಿ ರಾಜ್ಯದ ಖಾಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ಮೊದಲ ಆದ್ಯತೆ

ಬೆಂಗಳೂರು: ಐಟಿ, ಬಿಟಿ ಸೇರಿದಂತೆ ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿ, ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡುವುದೂ ಸೇರಿ 14 ಪ್ರಮುಖ ಶಿಫಾರಸುಗಳನ್ನು ಒಳಗೊಂಡ ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ನೇತೃತ್ವದ ಪರಿಷ್ಕರಣಾ ಸಮಿತಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದೆ.

ಈ ಮೂಲಕ ದಶಕಗಳಿಂದ ಕಡತದಲ್ಲೇ ಉಳಿದಿದ್ದ ಡಾ. ಸರೋಜಿನಿ ಮಹಿಷಿ ವರದಿಗೆ ಮರುಜೀವ ಬಂದಿದ್ದು, ವರದಿಯ ಪರಿಷ್ಕೃತ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಕೊನೆಗೂ ಮನಸು ಮಾಡಿದೆ. ವರದಿಯಲ್ಲಿ 14 ಶಿಫಾರಸುಗಳಿದ್ದು, ಕಾನೂನು ತಜ್ಞರ ಸಲಹೆ ಪಡೆದು ಸಚಿವ ಸಂಪುಟದಲ್ಲಿ ಚರ್ಚಿಸಿ, ಅಗತ್ಯಬಿದ್ದರೆ ಸಣ್ಣ-ಪುಟ್ಟಮಾರ್ಪಾಟುಗಳೊಂದಿಗೆ ಹೊಸ ಕಾನೂನು ಜಾರಿಗೆ ತರುವುದಾಗಿ ಸಿದ್ದರಾಮಯ್ಯ ಸಮಿತಿಗೆ ಭರವಸೆ ನೀಡಿದರು.

ತಿದ್ದುಪಡಿ ವಿಶ್ವಾಸ: ಐಟಿ, ಬಿಟಿ ಸೇರಿದಂತೆ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೆ ತರಲು ಕಾನೂನಿಗೆ ತಿದ್ದುಪಡಿ ತರಲಾಗುವುದು. ಎ ಮತ್ತು ಬಿ ದರ್ಜೆಯ ಹುದ್ದೆಗಳಲ್ಲಿ ಶೇ.80ರಷ್ಟು ಹಾಗೂ ಸಿ ಮತ್ತು ಡಿ ದರ್ಜೆ ಹುದ್ದೆಗಳಲ್ಲಿ ಶೇ.100ರಷ್ಟುಉದ್ಯೋಗಗಳನ್ನು ಕನ್ನಡಿಗರಿಗೆ ಕಡ್ಡಾಯವಾಗಿ ನೀಡುವಂತೆ ಕಾನೂನಿಗೆ ತಿದ್ದುಪಡಿ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐಟಿ, ಬಿಟಿ, ಮನರಂಜನಾ ಕೇಂದ್ರಗಳು, ಹೋಟೆಲ್‌ಗಳು ಸೇರಿದಂತೆ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವುದು ಅನಿವಾರ್ಯವಾಗಿದ್ದು, ಇದನ್ನೂ ಒಳಗೊಂಡಂತೆ ಹಲವು ಶಿಫಾರಸುಗಳನ್ನು ಸಮಿತಿ ನೀಡಿದೆ. ಡಾ.ಸರೋಜಿನಿ ಮಹಿಷಿ ನೀಡಿದ ವರದಿ ಸಲ್ಲಿಕೆಯಾಗಿ ಬಹಳ ಕಾಲವಾಗಿತ್ತು. ಈಗ ಬದಲಾದ ಕಾಲಕ್ಕೆ ತಕ್ಕಂತೆ ವರದಿಯನ್ನು ಪರಿಷ್ಕರಿಸಬೇಕಾದ ಅಗತ್ಯವಿತ್ತು. ಹೀಗಾಗಿ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ನೇತೃತ್ವದ ಸಮಿತಿ ಎರಡು ಕಂತುಗಳಲ್ಲಿ ಅಗತ್ಯವಿರುವ ಅಂಶಗಳನ್ನು ಪರಿಗಣಿಸಿ ವರದಿ ನೀಡಿದೆ. ಪ್ರಸಕ್ತ ದಿನಗಳಲ್ಲಿ ಸರ್ಕಾರಿ ವಲಯದಲ್ಲಿ ಉದ್ಯೋಗಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅದೇ ಕಾಲಕ್ಕೆ ಖಾಸಗಿ ವಲಯದಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತಿದೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕು ಎಂಬ ಕೂಗು ಪದೇ ಪದೇ ಕೇಳಿ ಬರುತ್ತಿತ್ತು. 

ಇದಕ್ಕೆ ಪೂರಕವಾಗಿ ನಾವು ಹೆಜ್ಜೆ ಇಡಬೇಕಾದ ಅನಿವಾರ್ಯತೆ ಇದೆ ಎಂದ ಅವರು, ಇದೇ ರೀತಿ ಕೇಂದ್ರದ ಪಠ್ಯಕ್ರಮವೂ ಸೇರಿದಂತೆ ವಿದ್ಯಾರ್ಥಿಗಳಿಗೆ ಒಂದರಿಂದ ಹತ್ತನೇ ತರಗತಿಯವರೆಗೆ ರಾಜ್ಯಭಾಷೆಯನ್ನು ಬೋಧಿಸುವ ಅನಿವಾರ್ಯತೆ ಇದೆ ಎಂದು ಹೇಳಿದರು. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ನಿರ್ದಿಷ್ಟ ಪ್ರಮಾಣದ ಉದ್ಯೋಗಾವಕಾಶ ಒದಗಿಸಲು ಪೂರಕವಾಗುವಂತೆ ಕಾನೂನಿಗೆ ಸೂಕ್ತ ತಿದ್ದುಪಡಿ ತರುವುದು ಹಾಗೂ ಕರ್ನಾಟಕದಲ್ಲಿ ಕನ್ನಡದಲ್ಲೇ ವ್ಯವಹಾರ ನಡೆಯಬೇಕು ಎಂಬುದು ಸೇರಿದಂತೆ ಹಲವು ಅಂಶಗಳನ್ನು ಸಮಿತಿ ಶಿಫಾರಸಿನಲ್ಲಿ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜತೆ ಚರ್ಚಿಸಿ, ನಂತರ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.

ಸಚಿವರಾದ ಟಿ.ಬಿ. ಜಯಚಂದ್ರ, ರಮಾನಾಥ್‌ ರೈ, ಶಾಸಕರಾದ ವಿ.ಎಸ್‌. ಉಗ್ರಪ್ಪ, ಎಚ್‌.ಎಂ. ರೇವಣ್ಣ, ಸಮಿತಿಯ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ಸದಸ್ಯರಾದ ಗೊ.ರು. ಚನ್ನಬಸಪ್ಪ, ಹೇಮಲತಾ ಮಹಿಷಿ, ರಾ.ನಂ. ಚಂದ್ರಶೇಖರ್‌, ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಪ್ರೊ.ಕೆ. ಮರುಳಸಿದ್ದಪ್ಪ, ಮಾಲತಿ ಪಟ್ಟಣಶೆಟ್ಟಿ, ನಲ್ಲೂರ್‌ ಪ್ರಸಾದ್‌, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರಸಿಂಗ್‌ ಬಾಬು ಮತ್ತಿತರರು ಪಾಲ್ಗೊಂಡಿದ್ದರು.

ಸರೋಜಿನಿ ಮಹಿಷಿ ವರದಿಯಲ್ಲಿ ಏನಿದೆ?
ಡಾ.ಸರೋಜಿನಿ ಮಹಿಷಿ ಪರಿಷ್ಕೃತ ವರದಿಯಲ್ಲಿ ಒಟ್ಟು ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ರಾಜ್ಯ ಸರ್ಕಾರ ಅನುಷ್ಠಾನಗೊಳಿಸಬೇಕಾದ ಅಂಶಗಳ 14 ಶಿಫಾರಸುಗಳಿವೆ. ಎರಡನೇ ಭಾಗದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾಗಿರುವ ಸಲಹೆಗಳ ಒಂಬತ್ತು ಅಂಶಗಳನ್ನು ಒಳಗೊಂಡ ಶಿಫಾರಸುಗಳಿವೆ. ಮೂರನೇ ಭಾಗದಲ್ಲಿ ಡಾ. ಸರೋಜಿನಿ ಮಹಿಷಿ ವರದಿಯ ಸಂಪೂರ್ಣ ಶಿಫಾರಸುಗಳ ಮಾಹಿತಿ ಇದೆ.

ಪ್ರಮುಖ ಶಿಫಾರಸುಗಳು:
* ಐಟಿ, ಬಿಟಿ ಉದ್ಯೋಗ​​ದಲ್ಲಿ ಕನ್ನಡಿಗರಿಗೆ ಮೀಸಲಿಗೆ ಪೂರ್ವ ಷರತ್ತು ವಿಧಿಸಬೇಕು 
* ಎಂಎನ್‌ಸಿ ಬ್ಯಾಂಕ್‌ಗಳೂ ಸೇರಿ ರಾಜ್ಯದ ಎಲ್ಲ ಬ್ಯಾಂಕ್‌'ಗಳಲ್ಲಿ ಗುಮಾಸ್ತರ ಹುದ್ದೆ ನೇಮಕಾತಿ ವೇಳೆ ಕನ್ನಡ ಭಾಷಾ ಜ್ಞಾನ ಕಡ್ಡಾಯಗೊಳಿಸಬೇಕು
* ರಾಜ್ಯದ ಸರ್ಕಾರಿ ವಲಯದ ಉದ್ದಿಮೆ​ಗಳಲ್ಲಿ ಎಲ್ಲ ಹುದ್ದೆಗಳಿಗೂ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಅನಿವಾರ್ಯ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಪೂರ್ವಾನುಮತಿಯೊಂದಿಗೆ ಹೊರ ರಾಜ್ಯದವರನ್ನು ಪರಿಗಣಿಸಬಹುದು.
* ಉದ್ಯೋಗ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಲು ಪ್ರತ್ಯೇಕ ತಾಂತ್ರಿಕ ಸಲಹಾ ಮಂಡಳಿ ರಚಿಸಬೇಕು.
* ಕೇಂದದ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ಮಾದರಿಯಲ್ಲಿ ರಾಜ್ಯದ ಎಲ್ಲ ವಲಯಗಳ ಉದ್ಯೋಗಾವಕಾಶವನ್ನು ಕನ್ನಡದಲ್ಲಿಯೇ ಜಾಹೀರಾತು ನೀಡಬೇಕು.
* ಸ್ಥಳೀಯರು ಎಂದು ಪರಿಗಣಿಸುವಾಗ ರಾಜ್ಯದಲ್ಲಿ 15 ವರ್ಷಗಳ ಕಾಲ ವಾಸವಾಗಿರುವ ನಿರ್ಬಂಧ ಇರಬೇಕು. ಕನ್ನಡ ಭಾಷಾ ಜ್ಞಾನವೂ ಕಡ್ಡಾಯವಾಗಿ ಇರಬೇಕು.
* ಹೊರರಾಜ್ಯಗಳಲ್ಲಿ ಕನ್ನಡ ಮಾಧ್ಯಮದಲ್ಲಿ 10ನೇ ತರಗತಿವರೆಗೆ ಓದಿರುವ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿ ಓದಿದವರಿಗೆ ಸಿಗುವ ಎಲ್ಲ ಸೌಲಭ್ಯಗಳು ಸಿಗಬೇಕು.
* ರಾಜ್ಯದ ಕೇಂದ್ರ ಮತ್ತು ಸರ್ಕಾರಿ ಕಚೇರಿಗಳು, ಉದ್ಯಮಗಳು ಹಾಗೂ ಖಾಸಗಿ ವಲಯದಲ್ಲಿ ನಾಮಫಲಕ, ಜಾಹೀರಾತು ಫಲಕ ಹಾಗೂ ಹೆದ್ದಾರಿ ಫಲಕಗಳನ್ನು ಅಳವಡಿಸುವಾಗ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು.
* ರಾಜ್ಯದಲ್ಲಿರುವ ಸಿಬಿಎಸ್‌ಸಿ, ಐಸಿಎಸ್‌'ಸಿ, ಕೇಂದ್ರೀಯ ವಿದ್ಯಾಲಯ, ನವೋದಯ ವಿದ್ಯಾಲಯ, ಇತರ ಆಂಗ್ಲ ಭಾಷೆಗಳ ಶಿಕ್ಷಣ ಸಂಸ್ಥೆಗಳಲ್ಲಿ 1ರಿಂದ 10ನೇ ತರಗತಿವರೆಗೆ ರಾಜ್ಯಭಾಷೆಯಾದ ಕನ್ನಡವನ್ನು ಒಂದು ವಿಷಯವಾಗಿ ಕಡ್ಡಾಯಗೊಳಿಸಬೇಕು.
* ಉನ್ನತ ಶಿಕ್ಷಣ ಅಥವಾ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು.
* ಸರ್ಕಾರ ಆಡಳಿತದಲ್ಲಿ ಬಳಸುವ ಎಲ್ಲ ತಂತ್ರಾಂಶಗಳು, ಖಾಸಗಿ ವಲಯದ ಸಾರ್ವಜನಿಕ ಸಂಪರ್ಕದಲ್ಲಿ ಬಳಸುವ ಸಾಧನಗಳು, ಅಭಿವ್ಯಕ್ತಿ ಮಾಹಿತಿಗಳು ಕನ್ನಡದಲ್ಲೇ ಕಡ್ಡಾಯವಾಗಿ ಬಳಸಬೇಕು.

(ಕನ್ನಡಪ್ರಭ ವಾರ್ತೆ)
epaper.kannadaprabha.in