ಅಹಮದಾಬಾದ್ (ಅ. 30): ದೇಶದ ಮೊದಲ ಗೃಹ ಸಚಿವ, ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಶ್ವದ ಅತಿ ಎತ್ತರದ ಏಕತಾ ಪ್ರತಿಮೆಯನ್ನು ಪ್ರಧಾನಿ ಮೋದಿ ಅವರು ಪಟೇಲರ ಜನ್ಮದಿನವಾದ ನಾಳೆ ಲೋಕಾರ್ಪಣೆಗೊಳಿಸಲಿದ್ದಾರೆ.

ನರ್ಮದಾ ನದಿಯ ದಂಡೆಯ ಮೇಲಿರುವ 182 ಮೀಟರ್ ಎತ್ತರದ ಸರ್ದಾರ್ ಪ್ರತಿಮೆಯ ನಿರ್ಮಾಣ ಕಾರ್ಯ ಕೇವಲ 33 ತಿಂಗಳಿನಲ್ಲೇ ಪೂರ್ಣಗೊಂಡಿದೆ. 2989 ಕೋಟಿ ರು. ವೆಚ್ಚದಲ್ಲಿ ಯೋಜನೆಯನ್ನು ಪೂರ್ಣಗೊಳಿಸಲಾಗಿದೆ. ಅಮೆರಿಕದ ಲಿಬರ್ಟಿ ಪ್ರತಿಮೆಗಿಂತಲೂ ಎರಡು ಪಟ್ಟು ದೊಡ್ಡದಾಗಿರುವ ಸರ್ದಾರ್ ಪ್ರತಿಮೆಗೆ ಕಂಚಿನ ಲೆಪನವನ್ನು ಹೊರತುಪಡಿಸಿ ಉಳಿದೆಲ್ಲಾ ಕಾಮಗಾರಿಗಳನ್ನು ಸ್ವದೇಶಿಯವಾಗಿ ನಿರ್ಮಿಸಲಾಗಿದೆ.

ಸದ್ಯ ವಿಶ್ವದ ಅತಿ ಎತ್ತರದ ಪ್ರತಿಮೆ ಚೀನಾದಲ್ಲಿದೆ. ಲೂಶಾನ್‌ನಲ್ಲಿರುವ ಸ್ಪ್ರಿಂಗ್ ಟೆಂಪಲ್ ಬುದ್ಧನ ಪ್ರತಿಮೆ 126 ಮೀಟರ್ ಎತ್ತರ ವಾಗಿದೆ. ಆದರೆ, ಪ್ರತಿಮೆಯನ್ನು ಪೂರ್ಣ ಗೊಳಿಸಲು 11 ವರ್ಷಗಳು ಬೇಕಾಗಿದ್ದವು.

33 ತಿಂಗಳಿನಲ್ಲೇ ಪೂರ್ಣ:

2013 ಅಕ್ಟೊಬರ್ 31 ರಂದು ಶಂಕುಸ್ಥಾಪನೆ ನೆರವೇರಿದ್ದರೂ, ಸರ್ದಾರ್ ಪ್ರತಿಮೆಯ ನೈಜ ನಿರ್ಮಾಣ ಕಾರ್ಯ 2015 ರ ಡಿ.19 ರಿಂದ ಪ್ರಾರಂಭಗೊಂಡಿತ್ತು.180,000 ಕ್ಯುಬಿಕ್ ಟನ್ ಸಿಮೆಂಟ್ ಕಾಂಕ್ರೀಟ್, 18,500 ಟನ್ ಉಕ್ಕು, 1,700 ಟನ್ ಕಂಚು ಹಾಗೂ 1,850 ಟನ್ ಉಕ್ಕಿನ ಕಂಚಿನ ಲೇಪನವನ್ನು ಪ್ರತಿಮೆ ಬಳಸಲಾಗಿದೆ.

180 ಕಿ.ಮೀ. ವೇಗದ ಬಿರುಗಾಳಿಯನ್ನು ತಡೆಯುವ ಸಾಮರ್ಥ್ಯವನ್ನು ಸರ್ದಾರ್ ಪ್ರತಿಮೆ ಹೊಂದಿದೆ. ಅಲ್ಲದೇ ರೈತರಿಂದ ಸಂಗ್ರಹಿಸಿದ ಉಕ್ಕನ್ನು ಬಳಸಿರುವುದು ಈ ಪ್ರತಿಮೆಯ ಇನ್ನೊಂದು ವಿಶೇಷ.