Asianet Suvarna News Asianet Suvarna News

ಸರ್ದಾರ್‌ ಪಟೇಲರ ಬಾನೆತ್ತರದ ಮೂರ್ತಿ ಉದ್ಘಾಟನೆಗೆ ಸಿದ್ಧ! ಏನಿದರ ವಿಶೇಷ..?

ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಗಗನಚುಂಬಿ ಪ್ರತಿಮೆ ಬುಧವಾರ ಅನಾವರಣಗೊಳ್ಳುತ್ತಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ನರ್ಮದಾ ಅಣೆಕಟ್ಟಿನ ಮುಂಭಾಗದಲ್ಲಿ ಹರಿಯುವ ನರ್ಮದಾ ನದಿಯ ಮಧ್ಯದಲ್ಲಿ ನಿರ್ಮಾಣವಾಗಿರುವ ಬೃಹತ್‌ ಸ್ಮಾರಕವಿದು. 

Sardar Patel statue inauguration today Speciality Of This Statue
Author
Bengaluru, First Published Oct 31, 2018, 7:20 AM IST
  • Facebook
  • Twitter
  • Whatsapp

ವಡೋದರ :  ಸ್ವಾತಂತ್ರ್ಯ ಸೇನಾನಿ, ಭಾರತದ ಉಕ್ಕಿನ ಮನುಷ್ಯ, ದೇಶದ ಪ್ರಪ್ರಥಮ ಉಪಪ್ರಧಾನ ಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ಗಗನಚುಂಬಿ ಪ್ರತಿಮೆ ಬುಧವಾರ ಅನಾವರಣಗೊಳ್ಳುತ್ತಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿರುವ ನರ್ಮದಾ ಅಣೆಕಟ್ಟಿನ ಮುಂಭಾಗದಲ್ಲಿ ಹರಿಯುವ ನರ್ಮದಾ ನದಿಯ ಮಧ್ಯದಲ್ಲಿ ನಿರ್ಮಾಣವಾಗಿರುವ ಬೃಹತ್‌ ಸ್ಮಾರಕವಿದು. 

ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯೊಂದಿಗೆ ತಲೆಯೆತ್ತಿದ ಈ ಭವ್ಯ ನಿರ್ಮಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಲಿದ್ದಾರೆ. ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಸ್ವಾತಂತ್ರ್ಯದೇವಿ ಪ್ರತಿಮೆಯ ದುಪ್ಪಟ್ಟು ಎತ್ತರವಿರುವ ಈ ‘ಏಕತಾ ಪ್ರತಿಮೆ’  ಪಟೇಲ್‌ ಅವರ 143ನೇ ಜನ್ಮದಿನಾಚರಣೆಯಂದೇ ಉದ್ಘಾಟನೆಗೊಳ್ಳುತ್ತಿರುವುದು ವಿಶೇಷ. ಅ.31ರ ಪಟೇಲ್‌ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿವಸ್‌’ ಆಗಿ ಆಚರಿಸಲಾಗುತ್ತಿದ್ದು, ಅದೇ ದಿನ ‘ಏಕತಾ ಪ್ರತಿಮೆ’ ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳ್ಳುತ್ತಿದೆ. ಇಂತಹ ಹಲವು ವೈಶಿಷ್ಟ್ಯಗಳುಳ್ಳ ಮಹಾಪ್ರತಿಮೆಯ ಪ್ರಮುಖ ಅಂಶಗಳು ಇಂತಿವೆ.


240 ಮೀಟರ್‌: ಅಡಿಪಾಯವೂ ಸೇರಿ ನೆಲದ ಮಟ್ಟದಿಂದ ಸರ್ದಾರ್‌ ಪ್ರತಿಮೆಯ ತುತ್ತತುದಿಯ ವರೆಗಿನ ಒಟ್ಟಾರೆ ಎತ್ತರ

182 ಮೀಟರ್‌: ಚೀನಾದ 153 ಮೀ. ಎತ್ತರದ ಬುದ್ಧ ಪ್ರತಿಮೆಯನ್ನು ಹಿಂದಿಕ್ಕಿ ವಿಶ್ವದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆ

2000 ಚಿತ್ರ: ಪ್ರತಿಮೆಯ ಮುಖ ವಿನ್ಯಾಸ ಮಾಡಲು ಪಟೇಲರ ವಿವಿಧ ಭಂಗಿಯ ಚಿತ್ರ ಪರಿಶೀಲನೆ, ಇತಿಹಾಸ ತಜ್ಞರ ನೆರವು

2989 ಕೋಟಿ: ಈ ಬೃಹತ್‌ ಏಕತಾ ಪ್ರತಿಮೆಯ ವಿನ್ಯಾಸ, ನಿರ್ಮಾಣ, ನಿರ್ವಹಣೆಗೆ ತಗುಲಿದ ಒಟ್ಟಾರೆ ವೆಚ್ಚದ ಮೊತ್ತ

25000 ಟನ್‌: ಪ್ರತಿಮೆ ನಿರ್ಮಾಣಕ್ಕೆ ಬಳಸಲಾದ ಕಬ್ಬಿಣ. ಇದರಲ್ಲಿ ದೇಶದ ರೈತರು ನೀಡಿದ 135 ಟನ್‌ ಕಬ್ಬಿಣವೂ ಸೇರಿದೆ

6.5 ತೀವ್ರತೆ: ಇಷ್ಟು ತೀವ್ರವಾದ ಭೂಕಂಪ ಹಾಗೂ 180 ಕಿ.ಮೀ. ವೇಗದ ಬಿರುಗಾಳಿ ತಡೆದುಕೊಳ್ಳುವ ಶಕ್ತಿ ಈ ಪ್ರತಿಮೆಗೆ

3500 ಕಾರ್ಮಿಕರು: 3500 ಕಾರ್ಮಿಕರಿಂದ ಪ್ರತಿಮೆ ನಿರ್ಮಾಣ. ಇವರೆಲ್ಲ ಎರಡು ಪಾಳಿಯಲ್ಲಿ ಕೆಲಸ ಮಾಡಿದ್ದು ವಿಶೇಷ

20000 ಚ.ಮೀ.: ಪ್ರತಿಮೆ ಹಾಗೂ ಅದರ ಸುತ್ತಲಿನ ಉದ್ಯಾನ ಮತ್ತಿತರ ಸೌಲಭ್ಯಗಳಿರುವ ಪ್ರದೇಶದ ಒಟ್ಟು ವಿಸ್ತೀರ್ಣ

12 ಚದರ ಕಿ.ಮೀ.: ನರ್ಮದಾ ಡ್ಯಾಂ ಬಳಿಯ ನದಿಯ ಮಧ್ಯೆ ಪ್ರತಿಮೆ ಸುತ್ತ ನಿರ್ಮಿಸಲಾದ ಕೃತಕ ಸರೋವರದ ವ್ಯಾಪ್ತಿ

3 ವರ್ಷ: ಯೋಜನೆ ರೂಪಿಸಿದ್ದು 2010ರಲ್ಲಿ. ಕಾಮಗಾರಿಗೆ 2013ರಲ್ಲಿ ಚಾಲನೆ. 2015ಕ್ಕೆ ನಿರ್ಮಾಣ ಶುರು. ಈಗ ಸಿದ್ಧ

200 ಪ್ರವಾಸಿಗರು: ಲಿಫ್ಟ್‌ನಲ್ಲಿ ಮೇಲಕ್ಕೇರಿ ಪ್ರತಿಮೆಯ 153 ಅಡಿ ಎತ್ತರದಲ್ಲಿ ಒಮ್ಮೆಗೆ 200 ಜನ ನಿಂತು ವೀಕ್ಷಿಸಬಹುದು

15000 ಉದ್ಯೋಗ: ಈ ಯೋಜನೆಯಿಂದಾಗಿ ಒಂದು ವರ್ಷದಲ್ಲಿ ನೇರವಾಗಿ ಉದ್ಯೋಗ ಪಡೆಯಲಿರುವ ಬುಡಕಟ್ಟು ಜನ

ಎಲ್ಲಿದೆ ಇದು?  ಹೋಗೋದ್ಹೇಗೆ?

ಗುಜರಾತ್‌ನ ವಡೋದರಾ ನಗರದಿಂದ ಸುಮಾರು 130 ಕಿ.ಮೀ. ದೂರದಲ್ಲಿ ಕೇವಡಿಯಾ ಎಂಬ ಪಟ್ಟಣವಿದೆ. ನರ್ಮದಾ ನದಿಗೆ ಅಡ್ಡಲಾಗಿ ಕಟ್ಟಿರುವ ಪ್ರಸಿದ್ಧ ಸರ್ದಾರ್‌ ಸರೋವರ ಅಣೆಕಟ್ಟಿನ ಮಗ್ಗುಲಿನ ಪಟ್ಟಣವಿದು. ಇಲ್ಲಿಂದ ‘ಏಕತಾ ಪ್ರತಿಮೆ’ಗೆ 3.5 ಕಿ.ಮೀ. ಉದ್ದದ ವಿಶಾಲವಾದ ರಸ್ತೆ ನಿರ್ಮಿಸಲಾಗಿದೆ. ಬಸ್‌ ಸೌಲಭ್ಯವಿದೆ.

ಪ್ರತಿಮೆ ಜೊತೆ ಇನ್ನೇನಿದೆ ಇಲ್ಲಿ?

ಈ ಪ್ರದೇಶದಲ್ಲಿ ಕೇವಲ ಏಕತಾ ಪ್ರತಿಮೆಯಷ್ಟೇ ನಿರ್ಮಾಣವಾಗಿಲ್ಲ. ಪ್ರವಾಸಿಗರ ಅನುಕೂಲಕ್ಕಾಗಿ ತ್ರಿವಳಿ ತಾರಾ ಹೋಟೆಲ್‌, ವಸ್ತು ಸಂಗ್ರಹಾಲಯ ಹಾಗೂ ದೃಕ್‌-ಶ್ರವಣ ಕೇಂದ್ರ ನಿರ್ಮಿಸಲಾಗಿದೆ. ಇದನ್ನು ವೈವಿಧ್ಯಮಯ ಪ್ರವಾಸಿ ಕೇಂದ್ರ ಆಗಿಸುವ ದೃಷ್ಟಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

Follow Us:
Download App:
  • android
  • ios