ಮುಂಬೈ: ಬಾಲಿವುಡ್‌ ಕಂಡ ಅತ್ಯಂತ ಯಶಸ್ವಿ ಮತ್ತು ಕುಖ್ಯಾತಿಯ ನಟರ ಪೈಕಿ ಒಬ್ಬರಾದ ಸಂಜಯ್‌ದತ್‌ ಜೀವನ ಕುರಿತ ಸಂಜು ಎಂಬ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಈ ಹೊತ್ತಿನಲ್ಲೇ ಚಿತ್ರದ ನಿರ್ದೇಶಕ ರಾಜ್‌ಕುಮಾರ್‌ ಹಿರಾನಿ, ದತ್‌ರ ಕಂಡುಕೇಳರಿಯದ ಪ್ರೇಮ ಪ್ರಸಂಗಗಳನ್ನು ಮಾಧ್ಯಮವೊಂದರ ಮುಂದೆ ಬಿಚ್ಚಿಟ್ಟಿದ್ದಾರೆ.

ಯೌವ್ವನದ ದಿನಗಳಲ್ಲಿ ಯುವತಿಯರ ಮೆಚ್ಚಿನ ಹೀರೋ ಆಗಿದ್ದ ಸಂಜಯ್‌ದತ್‌ಗೆ ಪ್ರೇಮವೆಂಬುದು ಹುಚ್ಚಾಟವಾಗಿತ್ತು. ಸ್ವತಃ ದತ್‌ ಹೇಳಿಕೊಂಡಂತೆ ಖ್ಯಾತಿಯ ದಿನಗಳಲ್ಲಿ ಏನಿಲ್ಲವೆಂದರೂ ಆತ 308 ಜನ ಮಹಿಳೆಯರ ಜೊತೆ ಹಾಸಿಗೆ ಹಂಚಿಕೊಂಡಿದ್ದ. ಹಾಗೆಂದು ಇವರೆಲ್ಲರೂ ದತ್‌ರ ನೋಟಕ್ಕೆ ಬಲಿಯಾಗುತ್ತಿದ್ದರು ಎಂದಲ್ಲ. ಬಹಳಷ್ಟುಬಾರಿ ದತ್‌ ತಾವು ಕಣ್ಣುಹಾಕಿದ್ದ ಮಹಿಳೆಯರನ್ನ ತಮ್ಮ ತಾಯಿಯ ದೇಹ ಹೂಳಿದ್ದ ಸ್ಥಳಕ್ಕೆ ಕರೆದೊಯ್ದು, ತಾಯಿಯನ್ನು ಭೇಟಿ ಮಾಡಲು ಕರೆತಂದಿದ್ದೇನೆ ಎಂದು ಭಾವನಾತ್ಮಕವಾಗಿ ಹೇಳುತ್ತಿದ್ದಂತೆ. ಇದನ್ನು ಕೇಳಿದಾಕ್ಷಣವೇ ಆಕೆ ಫಿದಾ ಆಗಿ ಪ್ರೇಮಪಾಶಕ್ಕೆ ಸಿಕ್ಕಿಬಿಡುತ್ತಿದ್ದಳು. ದತ್‌ ಮುಂದಿನ ಹುಡುಗಿಗೆ ಗಾಳ ಹಾಕುವವರೆಗೂ ಆಕೆಯೇ ಈತನ ಪ್ರೇಯಸಿ. ಆದರೆ ದುರಂತವೆಂದರೆ ಹೀಗೆ ತಮ್ಮ ತಾಯಿ ನರ್ಗೀಸ್‌ ದತ್‌ರನ್ನು ಹೂಳಿದ್ದ ಸ್ಥಳ ಎಂದು ದತ್‌ ತೋರಿಸುತ್ತಿದ್ದ ಸ್ಥಳ ವಂಚನೆಯ ಭಾಗವಾಗಿರುತ್ತಿತ್ತಷ್ಟೇ.

ಇನ್ನು ತಾನು ಮೆಚ್ಚಿಕೊಂಡ ಹುಡುಗಿ ಕೈಕೊಟ್ಟರೆ ದತ್‌ಗೆ ತಡೆಯಲಾಗುತ್ತಿರಲಿಲ್ಲ. ಒಮ್ಮೆ ಹೀಗೆ ಹುಡುಗಿಯೊಬ್ಬಳು ಕೈಕೊಟ್ಟಳೆಂದು ಆಕ್ರೋಶಗೊಂಡ ದತ್‌, ತಮ್ಮ ಸ್ನೇಹಿತನ ಹೊಸ ಕಾರನ್ನು ತೆಗೆದುಕೊಂಡು ಹೋಗಿ ಅದನ್ನು ಪ್ರಿಯತಮೆಯ ಮನೆ ಮುಂದೆ ನಿಲ್ಲಿಸಿದ್ದ ಕಾರಿಗೆ ಗುದ್ದಿದ್ದ. ಬಳಿಕ ಅದು ದತ್‌ನ ಮಾಜಿ ಪ್ರಿಯತಮೆಯ ಹೊಸ ಬಾಯ್‌ಫ್ರೆಂಡ್‌ನ ಕಾರು ಎಂದು ಗೊತ್ತಾಗಿತ್ತು. ಹೀಗೆ ವಿಚಿತ್ರ ಸ್ವಭಾವದ ದತ್‌ ತಮ್ಮ ದಿನಗಳ ಬಹುತೇಕ ಎಲ್ಲಾ ನಟಿಯರ ಜೊತೆ, ತಾವು ನಾಯಕರಾಗಿ ಹೋದ ಬಂದ ನಂತರ ಚಿತ್ರರಂಗಕ್ಕೆ ಬಂದ ನಟಿಯರ ಜೊತೆ, ತಾವು ಚಿತ್ರರಂಗಕ್ಕೆ ಬರುವ ಮುನ್ನವೇ ನಟನೆಯಲ್ಲಿದ್ದವರ ಜೊತೆ ಡೇಟಿಂಗ್‌ ನಡೆಸಿದ್ದರು ಎಂದು ಹಿರಾನಿ ಹೇಳಿದ್ದಾರೆ.