ಬೆಂಗಳೂರು (ಸೆ.29): ಕುರುಬ ಸಮಾಜಕ್ಕೆ ಸಿದ್ದರಾಮಯ್ಯನವರೇ ನಾಯಕರು. ಕೆ.ಎಸ್.ಈಶ್ವರಪ್ಪನವರು ಕುರುಬ ಸಮಾಜದ ಅಭಿವೃದ್ಧಿಗೆ ಯಾವತ್ತೂ ಕೆಲಸ ಮಾಡಿಲ್ಲ. ಇದೀಗ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಿರುವುದು ಅರ್ಥಹೀನ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ವಾಗ್ದಾಳಿ ನಡೆಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಗುರುತಿಸಿಕೊಳ್ಳುವ ಉದ್ದೇಶದಿಂದ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದಾರೆ. ಬಿಜೆಪಿ ಒಳಜಗಳದಿಂದ ಬ್ರಿಗೇಡ್ ರಚನೆಯಾಗಿದೆ. ಆದರೆ ಈಶ್ವರಪ್ಪ ಬಿಜೆಪಿಯಲ್ಲಿ ಸಿಎಂ ಆಗಲು ಯಾವತ್ತಿಗೂ ಸಾಧ್ಯವಿಲ್ಲ ಎಂದು ಟೀಕಿಸಿದರು.
ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಹೆಸರಲ್ಲಿ ಅ.1ರಂದು ಹಾವೇರಿಯಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದಾರೆ. ಕುರುಬ ಸಮಾಜದ ಜನ ಈಶ್ವರಪ್ಪ ಅವರ ಮಾತಿಗೆ ಮರುಳಾಗಬಾರದು. ಬಿಜೆಪಿಯ ಒಳಜಗಳಕ್ಕೆ ಅವರನ್ನು ಉಪಯೋಗಿಸಿಕೊಳ್ಳಬಾರದು. ಇದು ಒಂದು ರೀತಿ ರಾಜಕೀಯ ತಂತ್ರಗಾರಿಕೆ. ಹಾಗಾಗಿ ಹಾವೇರಿ ಸಮಾವೇಶಕ್ಕೆ ಕುರುಬ ಸಮಾಜ ಬಹಿಷ್ಕಾರ ಹಾಕಬೇಕು ಎಂದು ವರ್ತೂರು ಪ್ರಕಾಶ್ ಮನವಿ ಮಾಡಿದರು.
