ಮುಜರಾಯಿ ಮಂತ್ರಿ ಸ್ಥಾನಕ್ಕೆ ಕಂಟಕ : ಉಳಿಸಿಕೊಳ್ಳಲು ಸಲಹೆ

https://static.asianetnews.com/images/authors/b348a094-0bef-5801-a1f6-61e57071185f.jpg
First Published 12, Jul 2018, 9:17 AM IST
Sandesh Nagaraj Advice To Muzarai Minister
Highlights

 ‘ಬಡ ದೇವರಿಗೆ ಸರ್ಕಾರದಿಂದ ಅನುದಾನ ನೀಡಿದರೆ ನಿಮಗೆ ಪುಣ್ಯ ಬರುತ್ತದೆ, ಜೊತೆಗೆ ಮಂತ್ರಿಗಿರಿ ಉಳಿಯುತ್ತದೆ. ಹಾಗಾಗಿ ಶ್ರೀಮಂತ ದೇವರ ಬದಲು ಬಡವರ ದೇವಸ್ಥಾನಗಳಿಗೆ ನೆರವು ನೀಡಿ ಎಂದು ಮುಜರಾಯಿ ಸಚಿವರಿಗೆ ಸಲಹೆ ನೀಡಿದರು. 
 

ವಿಧಾನಪರಿಷತ್‌ :  ‘ಬಡ ದೇವರಿಗೆ ಸರ್ಕಾರದಿಂದ ಅನುದಾನ ನೀಡಿದರೆ ನಿಮಗೆ ಪುಣ್ಯ ಬರುತ್ತದೆ, ಜೊತೆಗೆ ಮಂತ್ರಿಗಿರಿ ಉಳಿಯುತ್ತದೆ. ಹಾಗಾಗಿ ಶ್ರೀಮಂತ ದೇವರ ಬದಲು ಬಡವರ ದೇವಸ್ಥಾನಗಳಿಗೆ ನೆರವು ನೀಡಿ.

ಪ್ರಶ್ನೋತ್ತರ ವೇಳೆ, ಮುಜರಾಯಿ ದೇವಸ್ಥಾನಗಳಿಗೆ ನೀಡುತ್ತಿರುವ ಅನುದಾನ ಕುರಿತಂತೆ ಆರ್‌.ಧರ್ಮಸೇನ ಅವರು ಕೇಳಿದ ಪ್ರಶ್ನೆ ಸದನದಲ್ಲಿ ಕೆಲವು ಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

ಕಾಂಗ್ರೆಸ್‌ನ ಆರ್‌.ಧರ್ಮಸೇನ ಮಾತನಾಡಿ, ಎಲ್ಲ ದೇವಸ್ಥಾನಗಳಿಗೆ ಸರ್ಕಾರ ಅನುದಾನ ನೀಡುತ್ತಿದೆ. ವಿಧಾನಸಭೆ ಶಾಸಕರು ಕೋರಿದ ಅನುದಾನವನ್ನು ಬಿಡುಗಡೆ ಮಾಡಲಾಗುತ್ತಿದೆ. ಆದರೆ ಮೇಲ್ಮನೆ ಸದಸ್ಯರ ಕೋರಿಕೆಗೆ ಮನ್ನಣೆ ಸಿಗುತ್ತಿಲ್ಲ. ನಮ್ಮ ದೇವರು ಏನು ಕರ್ಮ ಮಾಡಿದ್ದಾರೋ ಗೊತ್ತಿಲ್ಲ, ಅನುದಾನ ಮಾತ್ರ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಆಗ ಬಿಜೆಪಿಯ ಕೆ.ಬಿ.ಶಾಣಪ್ಪ ಮಾತನಾಡಿ, ದೇವರುಗಳನ್ನು ಎ, ಬಿ ಮತ್ತು ಸಿ ಎಂದು ಕೆಟಗರಿ ಮಾಡಿಬಿಟ್ಟಿದ್ದೇವೆ. ದೇವಸ್ಥಾನಗಳ ಆದಾಯದ ಮೇಲೆ ಈ ರೀತಿ ಕೆಟಗರಿ ಮಾಡಲಾಗಿದೆ. ಆದರೆ ನಮ್ಮ ದೇವರುಗಳು ಮುರುಗಮ್ಮ, ದುರ್ಗಮ್ಮ, ಪೀಚಮ್ಮ ಮುಂತಾದವರಾಗಿದ್ದಾರೆ. ಇವರೆಲ್ಲರೂ ಪರಿಶಿಷ್ಟರ ದೇವರುಗಳು, ಇಂತಹ ಬಡ ದೇವರಿಗೆ ಅನುದಾನ ಕೊಟ್ಟರೆ ನಿಮಗೆ ಪುಣ್ಯ ಬರುತ್ತದೆ, ಸಣ್ಣ ದೇವರುಗಳಿಗೆ ಕರುಣೆ ತೋರಿ ಎಂದರು.

ಜೆಡಿಎಸ್‌ ಸದಸ್ಯ ಸಂದೇಶ್‌ ನಾಗರಾಜ್‌, ಬಡ ದೇವರುಗಳಿಗೆ ಹೆಚ್ಚಿನ ಅನುದಾನ ನೀಡಿ, ಶ್ರೀಮಂತ ದೇವರಿಗೆ ಅನುದಾನ ನೀಡದಿದ್ದರೂ ನಡೆಯುತ್ತದೆ. ಮುಜರಾಯಿ ಸಚಿವರಾದವರು ಮುಂದಿನ ಚುನಾವಣೆಯಲ್ಲಿ ಜಯ ಗಳಿಸಲ್ಲ, ಮಂತ್ರಿ ಸ್ಥಾನ ಉಳಿಯಲ್ಲ ಎಂಬ ಮಾತು ಇದೆ. ಹಾಗಾಗಿ ಬಡ ದೇವರುಗಳಿಗೆ ಅನುದಾನ ನೀಡಿದರೆ ನಿಮ್ಮ ಮಂತ್ರಿಗಿರಿ ಸಹ ಉಳಿಯುತ್ತದೆ ಎಂದರು.

ಸದಸ್ಯರ ಮಾತಿಗೆ ಉತ್ತರಿಸಿದ ಸಚಿವ ರಾಜಶೇಖರ್‌ ಬಿ. ಪಾಟೀಲ್‌, ಅನುದಾನದ ಲಭ್ಯತೆಗೆ ಅನುಗುಣವಾಗಿ ದೇವಸ್ಥಾನಗಳಿಗೆ ಮಂಜೂರು ಮಾಡಲಾಗುವುದು ಎಂದರು.

ರಾಜ್ಯದಲ್ಲಿ ವರ್ಷಕ್ಕೆ 25 ಲಕ್ಷ ರು.ಗಿಂತ ಹೆಚ್ಚು ಆದಾಯ ಪಡೆಯುವ ದೇವಸ್ಥಾನಗಳನ್ನು ಎ ವರ್ಗ, ಐದರಿಂದ 25 ಲಕ್ಷ ರು. ಒಳಗೆ ಆದಾಯ ಇರುವ ದೇವಸ್ಥಾನಗಳನ್ನು ಬಿ ವರ್ಗ ಹಾಗೂ ಐದು ಲಕ್ಷ ರು.ಗಿಂತ ಕಡಿಮೆ ಆದಾಯ ಇರುವ ದೇವಸ್ಥಾನಗಳನ್ನು ಸಿ ವರ್ಗ ಎಂದು ವರ್ಗೀಕರಣ ಮಾಡಲಾಗಿದೆ. ಎ ವರ್ಗದಲ್ಲಿ 392, ಬಿ ವರ್ಗದಲ್ಲಿ 151 ಹಾಗೂ ಸಿ ವರ್ಗದಲ್ಲಿ 34,213 ದೇವಸ್ಥಾನಗಳು ಬರುತ್ತವೆ. ಇವುಗಳ ಅನುದಾನದ ಕೋರಿಕೆ ಬಜೆಟ್‌ನಲ್ಲಿ ನೀಡಿದ ಅನುದಾನಕ್ಕಿಂತ ಹೆಚ್ಚು ಇದೆ. ಆದ್ದರಿಂದ ಅನುದಾನದ ಲಭ್ಯತೆಗೆ ಅನುಗುಣವಾಗಿ ದೇವಸ್ಥಾನಗಳಿಗೆ ಮಂಜೂರು ಮಾಡಲಾಗುವುದು ಎಂದರು.

loader