ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಬರುವ ಜನವರಿಯಲ್ಲಿ ನರಗುಂದದಲ್ಲಿ ನಡೆಯಲಿರುವ ರೈತರ ಪ್ರತಿಭಟನೆಯಲ್ಲಿ ಕನ್ನಡ ಚಿತ್ರೋದ್ಯಮ ಭಾಗಿಯಾಗುವ ಮೂಲಕ ಹೋರಾಟದಲ್ಲಿ ಧುಮುಕಲು ನಿರ್ಧರಿಸಿದೆ.
ಬೆಂಗಳೂರು (ಡಿ.28):ಮಹದಾಯಿ ನದಿ ನೀರಿನ ವಿವಾದ ಇತ್ಯರ್ಥಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಬರುವ ಜನವರಿಯಲ್ಲಿ ನರಗುಂದದಲ್ಲಿ ನಡೆಯಲಿರುವ ರೈತರ ಪ್ರತಿಭಟನೆಯಲ್ಲಿ ಕನ್ನಡ ಚಿತ್ರೋದ್ಯಮ ಭಾಗಿಯಾಗುವ ಮೂಲಕ ಹೋರಾಟದಲ್ಲಿ ಧುಮುಕಲು ನಿರ್ಧರಿಸಿದೆ.
ಗುರುವಾರ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ಸೊಬರದಮಠ ಹಾಗೂ ಇನ್ನಿತರ ಮುಖಂಡರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ರೈತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ನಟ ಶಿವ ರಾಜಕುಮಾರ್, ಜಗ್ಗೇಶ್ ಮತ್ತಿತರರು ಬುಧವಾರ ತುರ್ತು ಸಭೆ ನಡೆಸಿ ಹೋರಾಟದಲ್ಲಿ ಪಾಲ್ಗೊಳ್ಳುವ ವಿಷಯ ಪ್ರಕಟಿಸಿದರು. ನರಗುಂದದಲ್ಲಿ ನಡೆಯುವ ಪ್ರತಿಭಟನಾ ದಿನಾಂಕವನ್ನು ರೈತ ಮುಖಂಡರು ಹಾಗೂ ಕಲಾವಿದರು ನಿಗದಿಗೊಳಿಸಲಿದ್ದಾರೆ.
ರೈತರ ಹೋರಾಟದಲ್ಲಿ ಕಲಾವಿದರು ಕಾಣಿಸುತ್ತಿಲ್ಲ ಎಂಬ ಟೀಕೆಗಳಿಗೆ ಖಾರವಾಗಿ ಪ್ರತಿ ಕ್ರಿಯಿಸಿದ ಚಿತ್ರೋದ್ಯಮದ ಗಣ್ಯರು, ನಾಡಿನ ನೆಲ, ಜನ, ಭಾಷೆಯ ಹೋರಾಟದಲ್ಲಿ ಚಿತ್ರೋದ್ಯಮ ಯಾವತ್ತಿಗೂ ಹಿಂದೆ ಬಿದ್ದಿಲ್ಲ. ಗೋಕಾಕ್ ಚಳವಳಿ ಮೂಲಕ ಡಾ. ರಾಜ್‌ಕುಮಾರ್ ತೋರಿ ಸಿಕೊಟ್ಟ ಹಾದಿಯಲ್ಲಿಯೇ ಇಡೀ ಚಿತ್ರೋದ್ಯಮ ಸಾಗುತ್ತಾ ಬಂದಿದೆ. ಅನೇಕ ಹೋರಾಟಗಳ ಮೂಲಕ ಅದನ್ನು ಸಾಬೀತು ಮಾಡಿದೆ. ನೆಲ, ಜಲ, ಭಾಷೆಯ ಬದ್ಧತೆಯನ್ನು ಯಾರಿಂದಲೂ ಕಲಿಯಬೇಕಿಲ್ಲ. ಜನರಿಂದಲೇ ಇಲ್ಲಿ ಎಲ್ಲರೂ ಸೂಪರ್ ಸ್ಟಾರ್ ಆಗಿದ್ದಾರೆ. ಉದ್ಯಮವೂ ಅವರಿಂದಲೇ ಬೆಳೆದಿದೆ. ಅವರಿಗಾಗಿ ಎಲ್ಲಿಗಾದರೂ ಹೋಗಿ, ಎಂಥದ್ದೇ ಹೋರಾಟಕ್ಕೂ ಚಿತ್ರೋ ದ್ಯಮ ಸಿದ್ಧವಿದೆ ಎಂದು ಘೋಷಿಸಿದರು.
ಬಣ್ಣ ಹಚ್ಚಿಕೊಂಡು ಬರಬೇಡಿ- ಶಿವಣ್ಣ: ಈ ಸಂದರ್ಭದಲ್ಲಿ ಮಾತನಾಡಿದ ಶಿವರಾಜ ಕುಮಾರ್, ಏನೇ ಆದರೂ ನಟ-ನಟಿಯರು ಎಲ್ಲಿ ಅಂತ ಕೇಳುತ್ತಾರೆ. ನಾವೆಲ್ಲ ಏನು ಮಾಡಲು ಸಾಧ್ಯ? ಒಂದಷ್ಟು ಹಣ ಕೊಡಬಹುದು, ಇಲ್ಲವೇ ಹೋರಾಟಕ್ಕೆ ಬೆಂಬಲಿಸಿ ಪ್ರತಿಭಟನೆ ನಡೆಸಬ ಹುದು. ಆದರೆ ಈ ಸಮಸ್ಯೆಗಳನ್ನು ಬಗೆಹರಿಸಲು ಒಂದು ವ್ಯವಸ್ಥೆ ಇದೆ. ಆ ವ್ಯವಸ್ಥೆಯಲ್ಲಿರುವ ವರಿಗೆ ಇಚ್ಛಾಶಕ್ತಿ ಬೇಕಿದೆ. ಅವರೇ ಬಣ್ಣ ಹಚ್ಚಿಕೊಂಡು ಜನರ ಮಧ್ಯೆ ಬಂದರೆ ಸಮಸ್ಯೆ ಬಗೆಹರಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಯಾರೇ ಬಂದರೂ ಬಣ್ಣ ಹಚ್ಚಿಕೊಂಡು ಬರುವುದನ್ನು ಬಿಡಬೇಕು. ಅವರ ಸಮಸ್ಯೆಗೆ ನಿಜವಾಗಿಯೂ ಸ್ಪಂದಿಸುವ ಕೆಲಸ ಆಗಬೇಕು. ರೈತರಿಗೆ ಏನು ಮಾಡಬೇಕು? ಅವರ ಪರವಾಗಿ ಎಲ್ಲಿ, ಹೇಗೆ ಧ್ವನಿ ಎತ್ತಬೇಕು ಅನ್ನೋದು ನಮಗೂ ಗೊತ್ತಿದೆ. ಅವರು ಕರೆದರೆ ನಾವು ಎಲ್ಲಿಗಾದರೂ ಹೋಗಲು ಸಿದ್ಧರಿದ್ದೇವೆ ಎಂದರು.
