ನವದೆಹಲಿ(ಮಾ.03): ಇಡೀ ದೇಶ ಭಾರತೀಯ ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರ ಸುರಕ್ಷಿತ ಬರುವಿಕೆಗೆ ಸಂತಸ ವ್ಯಕ್ತಪಡಿಸಿದೆ.

ಆದರೆ ಕಾಂಗ್ರೆಸ್ ಮಾತ್ರ ಇದರಲ್ಲೂ ರಾಜಕೀಯ ಹುಡುಕುತ್ತಾ ತನ್ನ ಬಣ್ಣವನ್ನು ತಾನೇ ಬಯಲು ಮಾಡಿಕೊಳ್ಳುತ್ತಿದೆ. ವಿಂಗ್ ಕಮಾಂಡರ್ ಅಭಿನಂದನ್ ಯುಪಿಎ ಅವಧಿಯಲ್ಲಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡರು ಎಂದು ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಅಭಿನಂದನ್‌ ಕುರಿತು ಸರಣಿ ಟ್ವೀಟ್‌ಗಳನ್ನು ಮಾಡಿರುವ ಕೇಂದ್ರ ಮಾಜಿ ಸಚಿವ ಸಲ್ಮಾನ್ ಖುರ್ಷಿದ್, ‘ಶತ್ರುಗಳ ಆಕ್ರಮಣವನ್ನು ತಡೆದ ಭಾರತದ ಅಭಿನಂದನ್ ವರ್ಧಮಾನ್‌ಗೆ ಅಭಿನಂದನೆಗಳು. ವಿಂಗ್ ಕಮಾಂಡರ್ ಅಭಿನಂದನ್ ಪ್ರತಿಕೂಲ ಪರಿಸ್ಥಿತಿಯಲ್ಲಿ ಮಹಾನ್ ಸಮತೋಲನ ಮತ್ತು ವಿಶ್ವಾಸ ತೋರಿಸಿದ್ದಾರೆ. ಅವರು 2004ರಲ್ಲಿ ಸೇವೆಗೆ ಸೇರಿದ್ದು, ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸುವ ಫೈಟರ್‌ ಪೈಲಟ್‌ ಆಗಿ ಪರಿಣಿತಿ ಹೊಂದಿದರು’ ಎಂದು ಟ್ವೀಟ್‌ ಮಾಡಿದ್ದಾರೆ.

ಸಲ್ಮಾನ್ ಅವರ ಟ್ವೀಟ್ ಗೆ ಭಾರೀ ಟೀಕೆ ವ್ಯಕ್ತವಾಗಿದ್ದು, ಹಾಗಾದ್ರೆ, ಅಭಿನಂದನ್‌ ಹುಟ್ಟಿದ್ದು ಕಾಂಗ್ರೆಸ್ ಅವಧಿಯಲ್ಲಿ, ಇಂದಿರಾ ಗಾಂಧಿಗೆ ಈ ಕ್ರೆಡಿಟ್ ಕೊಡಬೇಕಲ್ಲವೇ ಎಂದು ಹಲವರು ತಮಾಷೆ ಮಾಡಿದ್ದಾರೆ. 

ಹಳೆಯ ಕಾಲದ ಮಿಗ್ 21 ವಿಮಾನವನ್ನು ಇಟ್ಟುಕೊಂಡಿದ್ದಕ್ಕೂ ಯುಪಿಎ ಕ್ರೆಡಿಟ್ ತೆಗೆದುಕೊಳ್ಳಬೇಕು ಎಂದು ಹಲವರು ಟ್ವೀಟ್‌ ಮಾಡಿದ್ದಾರೆ.