ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಲ್ಮಾನ್‌ ಖಾನ್‌ ಮೊದಲ 2 ದಿನದ ಜೈಲು ವಾಸಕ್ಕೆ ಹೈರಾಣಾಗಿ ಹೋಗಿದ್ದಾರೆ.

ಜೋಧ್‌ಪುರ: ಕೃಷ್ಣಮೃಗ ಹತ್ಯೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಲ್ಮಾನ್‌ ಖಾನ್‌ ಮೊದಲ 2 ದಿನದ ಜೈಲು ವಾಸಕ್ಕೆ ಹೈರಾಣಾಗಿ ಹೋಗಿದ್ದಾರೆ. ಗುರುವಾರ ಜೈಲು ಸೇರಿದ್ದ ಸಲ್ಲು, 2 ದಿನಗಳಿಂದ ನಿದ್ದೆ ಇಲ್ಲದೇ ರಾತ್ರಿ ಕಳೆದಿದ್ದಾರೆ. ನಿರೀಕ್ಷೆ ಇಲ್ಲದ ರೀತಿ ಎರಗಿ ಬಂದ 5 ವರ್ಷ ಜೈಲು ಶಿಕ್ಷೆ ಅವರನ್ನು ಕಂಗಾಲಾಗಿಸಿದೆ ಎಂದು ಮೂಲಗಳು ತಿಳಿಸಿವೆ.

ಗುರುವಾರ ರಾತ್ರಿ ಸಲ್ಮಾನ್‌ ಪದೇ ಪದೇ ರಕ್ತದೊತ್ತಡ ಏರಿಕೆಗೆ ತುತ್ತಾಗಿದ್ದು, ವೈದ್ಯರು ಅವರಿಗೆ ಚಿಕಿತ್ಸೆ ನೀಡಿದ್ದಾರೆ, ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗಿದ್ದಾರೆ.

ಊಟ ಬೇಡ: ಗುರುವಾರ ಜೈಲು ಅಧಿಕಾರಿಗಳು ಸಲ್ಮಾನ್‌ಗೆ ರಾತ್ರಿ ಊಟಕ್ಕೆ ದಾಲ್‌- ರೋಟಿ ನೀಡಿದ್ದರು. ಆದರೆ ಈ ಊಟವನ್ನು ಸಲ್ಮಾನ್‌ ತಿರಸ್ಕರಿಸಿದ್ದಾರೆ. ಸಲ್ಮಾನ್‌ರ ಈ ವರ್ತನೆ ಗಮನಿಸಿದ, ಜೈಲಿನಲ್ಲೇ ಸಲ್ಮಾನ್‌ ಸೆಲ್‌ನ ಪಕ್ಕದಲ್ಲೇ ಇರುವ ಸ್ವಯಂಘೋಷಿತ ದೇವಮಾನವ, ಆಸಾರಾಂ ಬಾಪು ತಾವು ಆಶ್ರಮದಿಂದ ತರಿಸಿಕೊಂಡಿದ್ದ ಊಟದಲ್ಲಿ ಸ್ವಲ್ಪ ಊಟವನ್ನು ಸಲ್ಮಾನ್‌ಗೆ ನೀಡಿದ್ದರು. ಅದನ್ನು ಸಲ್ಮಾನ್‌ ಸೇವಿಸಿದರು. ಆದರೆ ಬಳಿಕ ತಮ್ಮ ಹಾಸಿಗೆಯನ್ನು ಬೇಕಿದ್ದರೆ ಪಡೆಯುವಂತೆ ಆಸಾರಾಂ ನೀಡಿದ ಸಲಹೆಯನ್ನು ಸಲ್ಲು ತಿರಸ್ಕರಿಸಿದರು. ಬಳಿಕ ಜೈಲು ಸಿಬ್ಬಂದಿ ನೀಡಿ ರಗ್‌ ಹೊದ್ದುಕೊಂಡು ನೆಲದ ಮೇಲೇ ಮಲಗಿದರು ಎಂದು ಮೂಲಗಳು ತಿಳಿಸಿವೆ.

ತೀವ್ರ ಉದ್ವೇಗ: ಗುರುವಾರ ಸಂಜೆಯಿಡೀ ಬ್ಯಾರಕ್‌ನ ಹೊರಗೆ ಅತ್ತಿಂದಿತ್ತ ಓಡಾಡುತ್ತಿದ್ದ ಸಲ್ಮಾನ್‌ಗೆ ಒಳಗೆ ಹೋಗುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ ಘಟನೆಯೂ ನಡೆಯಿತು ಎನ್ನಲಾಗಿದೆ.

3 ಬಾರಿ ರಕ್ತದೊತ್ತಡ: ಗುರುವಾರ ಇಡೀ ರಾತ್ರಿ ಸಲ್ಮಾನ್‌ ತೀವ್ರ ರಕ್ತದೊತ್ತಡಕ್ಕೆ ಗುರಿಯಾಗಿದ್ದು ಕಂಡುಬಂತು. ಮೂರು ಬಾರಿ ಅವರ ಬಿಪಿ ಏರಿಕೆಯಾಗಿತ್ತು. ಅದನ್ನು ನಿಯಂತ್ರಣದಲ್ಲಿ ಇಡಲು ವೈದ್ಯರು ಔಷಧಿ ನೀಡಿದರು.

ಬೆಳಗ್ಗೆಯೂ ಉಪಾಹಾರ ಇಲ್ಲ: ಗುರುವಾರ ಬೆಳಗ್ಗೆ ಸಲ್ಮಾನ್‌ ಕೆಲ ಹೊತ್ತು ಜೈಲಿನ ಆವರಣದಲ್ಲೇ ವಾಕಿಂಗ್‌ ಮಾಡಿದರು. ಕೋರಿಕೆ ಮೇರೆಗೆ ಅವರಿಗೆ ಹಿಂದಿ ದಿನಪತ್ರಿಕೆಯೊಂದನ್ನು ಒದಗಿಸಲಾಗಿತ್ತು. ಬಳಿಕ ಅವರಿಗೆ ಚಹಾ ಮತ್ತು ಕಿಚಡಿ ನೀಡಲಾಯಿತಾದರೂ, ಅದನ್ನೂ ಸಲ್ಮಾನ್‌ ತಿರಸ್ಕರಿಸಿದರು ಎನ್ನಲಾಗಿದೆ.

ಆಪ್ತರ ಭೇಟಿ: ಸಲ್ಮಾನ್‌ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ನಟಿ ಪ್ರೀತಿ ಜಿಂಟಾ ಅವರು ಶುಕ್ರವಾರ ಜೈಲಿಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿದರು. ಇದೇ ವೇಳೆ, ಅವರ ವಕೀಲರು ಹಾಗೂ ಬಾಡಿಗಾರ್ಡ್‌ ಶೇರಾ ಕೂಡ ಭೇಟಿ ನೀಡಿ ಮಾತುಕತೆ ನಡೆಸಿದರು.

‘ಸಲ್ಮಾನ್‌ ಖಾನ್‌ ಇರುವ ಬ್ಯಾರಕ್‌ನ ಹೊರಗೆ ಭದ್ರತೆ ಹೆಚ್ಚಿಸಲಾಗಿದೆ. ಅವರಿಗೆ ಯಾವುದೇ ವಿಶೇಷ ಸವಲತ್ತು ನೀಡುತ್ತಿಲ್ಲ. ಸಾಮಾನ್ಯ ಕೈದಿಗಳಿಗೆ ನೀಡುವ ಊಟ, ತಿಂಡಿಯನ್ನೇ ನೀಡಲಾಗುತ್ತಿದೆ. ಅವರಿಗೆ ಒಂದು ಮರದ ಮಂಚ, ರಗ್‌ ಮತ್ತು ಕೂಲರ್‌ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.