ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕು. ಆ ದಿಸೆಯಲ್ಲಿ ಮತದಾರರು ಬಿಜೆಪಿ ಬೆಂಬಲಿಸಬೇಕು. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಬೇಕು ಎಂದು ಹೇಳಿದರು.

ಸಾಗರ(ಡಿ.28): ಮುಖ್ಯಮಂತ್ರಿ ಸಿದ್ಧರಾಮಯ್ಯ ಕೈಗೊಂಡಿರುವ ಸಾಧನಾ ಸಮಾವೇಶದಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪರನ್ನು ಬೈಯುವುದೇ ಸಾಧನೆ ಎಂಬಂತಾಗಿದೆ ಎಂದು ಶಾಸಕ ಸುರೇಶಕುಮಾರ್ ಟೀಕಿಸಿದರು.

ಇಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದ ಅವರು, ಸರ್ಕಾರದ ಖರ್ಚಿನಲ್ಲಿ ಈ ಸಮಾವೇಶಗಳು ನಡೆಯುತ್ತಿದ್ದು ಈ ಬಗ್ಗೆ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದ ಅವರು, ರಾಜ್ಯ ಸರ್ಕಾರ ಅಹಂಕಾರದ, ನಿದ್ರಾವಸ್ಥೆಯಲ್ಲಿರುವ, ಉಡಾಫೆಯ ಸರ್ಕಾರ ಎಂದು ಲೇವಡಿ ಮಾಡಿದರು. ಹಿರಿಯ ರಾಜಕಾರಣಿ, ಸಚಿವ ಕಾಗೋಡು ತಿಮ್ಮಪ್ಪನವರೇ ತಮ್ಮ ಸರ್ಕಾರವನ್ನು ಕೆಲಸ ಮಾಡದಿರುವ ಸರ್ಕಾರವೆಂದು ಹೇಳಿದ್ದಾರೆ. ರಾಜ್ಯದ ಜನರಂತೂ ಕಾಂಗ್ರೆಸ್ ಆಡಳಿತದಿಂದ ರೋಸಿ ಹೋಗಿದ್ದಾರೆ. ಬೇಸಿಗೆಯಲ್ಲಿ ಎಡವಿದ ಕಲ್ಲನ್ನು ಮಳೆಗಾಲದಲ್ಲಿ ಕಿತ್ತು ಹಾಕಬೇಕೆಂದು ಹಿರಿಯರು ಹೇಳುವ ಮಾತಿನಂತೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಕಿತ್ತುಹಾಕುವ ಕಾಲ ಇದೀಗ ಕೂಡಿ ಬಂದಿದೆ ಎಂದು ಹೇಳಿದರು.

ಮಾಜಿ ಸಚಿವ ಎಚ್.ಹಾಲಪ್ಪ ಮಾತನಾಡಿ, 50 ವರ್ಷಗಳಿಂದ ಸಾಗರ ಕ್ಷೇತ್ರದಲ್ಲಿ ಭೂಮಿ ವಿಚಾರವಾಗಿ ಹೋರಾಟ, ಚಳವಳಿ ಎಲ್ಲ ನಡೆದಿದೆ. ಕೇವಲ ಸಂಘರ್ಷವನ್ನೇ ಮಾಡಿಕೊಂಡು ಬಂದಾಗಿದೆ. ಸ್ವಲ್ಪ ಅಭಿವೃದ್ಧಿಯೂ ಆಗಬೇಡವೆ? ಪ್ರವಾಸೋದ್ಯಮಕ್ಕೆ ಪೂರಕವಾಗಿ ಕ್ಷೇತ್ರದಲ್ಲಿ ಒಂದಿಷ್ಟು ಅಭಿವೃದ್ಧಿ ಆಗಬೇಕು. ಐಟಿ ಬಿಟಿಗೆ ಸಂಬಂಧಿಸಿದಂತೆ ವ್ಯವಸ್ಥೆ ಆಗಬೇಕು. ಕಳೆದ ನಾಲ್ಕೂವರೆ ವರ್ಷಗಳಿಂದ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ನಡೆದಿಲ್ಲ ಎಂದರು.

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಮುಖ್ಯವಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಬೇಕು. ಆ ದಿಸೆಯಲ್ಲಿ ಮತದಾರರು ಬಿಜೆಪಿ ಬೆಂಬಲಿಸಬೇಕು. ಜಿಲ್ಲೆಯ ಏಳು ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲ್ಲಬೇಕು ಎಂದು ಹೇಳಿದರು.

ಕಾಗೋಡು ಅವರಿಗೆ ನಿಜವಾಗಿ ಜನಪರ ಕಾಳಜಿ ಇದ್ದಿದ್ದರೆ ಸಾಗರ ಕೊಳಚೆ ಪ್ರದೇಶದಂತೆ ಕಾಣುತ್ತಿರಲಿಲ್ಲ. ಕಾಗೋಡು ಕೇವಲ ಭೂಮಿ ಹಕ್ಕಿನ ಬಗ್ಗೆ ಮಾತನಾಡುತ್ತಾರೆ. ಯಾರಿಗೆ ಭೂಮಿ ಕೊಟ್ಟಿದ್ದಾರೆ. ಕೇವಲ ಉಳ್ಳವರಿಗೆ ಭೂಮಿ ಕೊಟ್ಟಿದ್ದಾರೆಯೇ ಹೊರತು ಬಡವರಿಗೆ ಕೊಟ್ಟಿಲ್ಲ ಎಂದು ಟೀಕಿಸಿದರು. ಆಯನೂರು ಮಂಜುನಾಥ್, ಡಿ.ಎಸ್.ವೀರಯ್ಯ, ಭಾರತಿ ಶೆಟ್ಟಿ ಮಾತನಾಡಿದರು.