ಭೋಪಾಲ್‌[ಏ.19]: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಕಾಂಗ್ರೆಸ್‌ನ ದಿಗ್ವಿಜಯ್‌ ಸಿಂಗ್‌ ವಿರುದ್ಧ ಬಿಜೆಪಿಯಿಂದ ಕಣಕ್ಕಿಳಿದಿರುವ ಸಾಧ್ವಿ ಪ್ರಜ್ಞಾ ಸಿಂಗ್‌, 2008ರ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲಿ ಜೈಲಿನಲ್ಲಿದ್ದಾಗ ಪೊಲೀಸರು ಭಾರೀ ಹಿಂಸೆ ನೀಡಿದ್ದನ್ನು ನೆನೆದು ಕಣ್ಣೀರಿಟ್ಟಘಟನೆ ನಡೆದಿದೆ.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಪ್ರಜ್ಞಾ ಸಿಂಗ್‌, ‘ಮಾಲೆಗಾಂವ್‌ ಘಟನೆ ನಡೆದ ಬಳಿಕ ಪೊಲೀಸರು 13 ದಿನ ಅಕ್ರಮ ಬಂಧನದಲ್ಲಿಟ್ಟಿದ್ದರು. ಮಾಲೆಗಾಂವ್‌ ಪ್ರಕರಣದಲ್ಲಿ ನನ್ನ ಪಾತ್ರವೂ ಇದೆ ಎಂದು ಒಪ್ಪಿಕೊಳ್ಳುವಂತೆ ಹಿಂಸಾಚಾರದ ಮೂಲಕ ಬಲವಂತಪಡಿಸಲಾಯಿತು. ಮೊದಲ ದಿನದಿಂದಲೇ ಪೊಲೀಸರು ತಮ್ಮ ಬೆಲ್ಟ್‌ನಿಂದ ಥಳಿಸುತ್ತಿದ್ದರು. ಅಲ್ಲದೆ, ನನಗೆ ಹೊಡೆಯುವಾಗ ಪೊಲೀಸರು ಬಾಯಿಗೆ ಬಂದಂತೆ ನಿಂದಿಸುತ್ತಿದ್ದರು.

ಪೊಲೀಸರ ಹೊಡೆತಕ್ಕೆ ನನ್ನ ಇಡೀ ದೇಹವೇ ಊದಿಕೊಂಡು ಮರಗುಟ್ಟಿತ್ತು,’ ಎಂದು ಜೈಲಿನಲ್ಲಿದ್ದಾಗ ತಾವು ಅನುಭವಿಸಿದ ನೋವನ್ನು ತೋಡಿಕೊಂಡರು.